ಮಹದಾಯಿಗಾಗಿ ಹೋರಾಟ ತೀವ್ರ

SOBARADAMATH NEW
Published on

ಹುಬ್ಬಳ್ಳಿ : ಲೋಕಸಭೆ ಚುನಾವಣೆವೊಳಗಾಗಿ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋರಾಟದ ರೂಪರೇಷೆಗಳನ್ನು ಜು. 21ರ ನಂತರ ಬಹಿರಂಗಪಡಿಸಲಾಗುವುದು ಎಂದು ತಿಳಿಸಿದರು.

ನ್ಯಾಯಾಲಯದಲ್ಲಿ ಮಹದಾಯಿ ವಿಷಯವಾಗಿ ಕರ್ನಾಟಕದ ಪರ ಸಮರ್ಥ ವಾದ ಮಂಡಿಸುವಲ್ಲಿ ವಿಫಲರಾದ ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಮೋಹನ ಕಾತರಕಿ ಅವರನ್ನು ತೆಗೆದುಹಾಕಿ, ಯೋಗ್ಯ ನ್ಯಾಯವಾದಿಯನ್ನು ರಾಜ್ಯದ ಪರ ವಾದಿಸಲು ನೇಮಿಸಬೇಕು ಎಂದು ಆಗ್ರಹಿಸಿದರು.

ಮಹದಾಯಿ ನೀರಿಗಾಗಿ ಹೋರಾಟ ಪ್ರಾರಂಭಿಸಿ ಜು. 16ಕ್ಕೆ ಒಂಬತ್ತು ವರ್ಷಗಳು ಗತಿಸಲಿವೆ. ಕುಡಿಯುವ ನೀರಿಗಾಗಿ ನ್ಯಾಯಾಧೀಕರಣ ರಾಜ್ಯಕ್ಕೆ ನೀಡಿರುವ ಪಾಲನ್ನು ಸಹ ಬಳಸಿಕೊಳ್ಳಲು ಸರ್ಕಾರಕ್ಕೆ ಆಗುತ್ತಿಲ್ಲ. ಮಹದಾಯಿ ನೀರಿಗಾಗಿ ಪಾದಯಾತ್ರೆ ಮಾಡಿದ್ದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿಯೂ ರಾಜ್ಯದ ಪಾಲಿನ ನೀರು ಬಳಸಿಕೊಳ್ಳುವಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ದೂರಿದರು.

ಮಹದಾಯಿ ಹೋರಾಟವನ್ನು ಕಾಂಗ್ರೆಸ್​ಗಿಂತ ಹೆಚ್ಚಾಗಿ ಬಿಜೆಪಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಉಪಯೋಗಿಸಿಕೊಂಡಿದೆ. ಅದರಲ್ಲೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ತಮ್ಮ ರಾಜಕಾರಣಕ್ಕಾಗಿ ಮಹದಾಯಿ ಹೋರಾಟವನ್ನು ಹೆಚ್ಚು ಬಳಸಿಕೊಂಡಿದ್ದಾರೆ. ಕರ್ನಾಟಕದ ವಿರುದ್ಧ ಮಹಾರಾಷ್ಟ್ರ ಹಾಗೂ ಗೋವಾದವರನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿದರು.

ಪ್ರಲ್ಹಾದ ಜೋಶಿ ಅವರು ನಾಲ್ಕು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿಯೂ ಉತ್ತರ ಕರ್ನಾಟಕದ ಜನರಿಗೆ ನ್ಯಾಯ ಒದಗಿಸಿಲ್ಲ. ಈ ಯೋಜನೆ ಅನುಷ್ಠಾನ ಕೈಗೂಡದೇ ಇರಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ದಿ. ಅನಂತಕುಮಾರ ಹಾಗೂ ಮೂರೂ ರಾಜಕೀಯ ಪಕ್ಷಗಳು ಹೇಗೆ ಕಾರಣರಾದರು ಎಂಬ ವಿವರಗಳುಳ್ಳ ಕಿರುಹೊತ್ತಿಗೆಯನ್ನು ಶೀಘ್ರ ಬಿಡುಗಡೆಗೊಳಿಸಲಾಗುವುದು. ಪ್ರಲ್ಹಾದ ಜೋಶಿ ಅವರು ಮಠಾಧೀಶರ ಮಧ್ಯೆ ಜಗಳ ಹಚ್ಚುತ್ತಿದ್ದು, ಅವರು ವೀರಶೈವ ಲಿಂಗಾಯತ ಧರ್ಮ ಒಡೆಯಲು ಮಾಡಿದ ಕುತಂತ್ರಗಳ ವಿವರಗಳು ಸಹ ಈ ಕಿರುಹೊತ್ತಿಗೆಯಲ್ಲಿ ಇರಲಿವೆ ಎಂದು ತಿಳಿಸಿದರು.

ಸೇನಾದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಅಲೆಕರ ಹಾಗೂ ರಾಜ್ಯ ವಕ್ತಾರ ಗುರು ರಾಯನಗೌಡ್ರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net