

ಶಿವಾನಂದ ಹಿರೇಮಠ ಗದಗ,
ಪ್ರಸಕ್ತ ಚುನಾವಣೆಯ ಬಿಜೆಪಿ ಟಿಕೆಟ್ ಹಂಚಿಕೆ ವಿಷಯದಲ್ಲಿ ಅನಿರೀಕ್ಷಿತ ಬೆಳವಣಿಗೆ ಆದ ನಂತರ ರಾಷ್ಟ್ರೀಯ ಪಕ್ಷಗಳ ನಡುಮನೆಯಲ್ಲಿ "ವೀರಶೈವ ಲಿಂಗಾಯತ' ಪರ ವಿರೋಧ ಹೇಳಿಕೆ, ಚರ್ಚೆ ಮುನ್ನೆಲೆಗೆ ಬರುತ್ತಿವೆ.
ಮಾಜಿ ಸಿಎಂ ಜಗದೀಶ ಶೆಟ್ಟರ, ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಿದ ನಂತರ ವೀರಶೈವ ಲಿಂಗಾಯತ ಪರ ಹೇಳಿಕೆಗಳನ್ನು ಏಕಾಏಕಿ ನೀಡುತ್ತಿರುವ ಜಿಲ್ಲೆಯ ಕಾಂಗ್ರೆಸ್ ನಾಯಕರ ವಿರುದ್ಧ 1989ರಲ್ಲಿ ವೀರಶೈವ ಲಿಂಗಾಯತರ ಸಮುದಾಯದ ಸಿಎಂ ವಿರೇಂದ್ರ ಪಾಟೀಲ ಅವರನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿಯನ್ನು ಬಿಜೆಪಿ ಉಲ್ಲೇಖಿಸುತ್ತ ಪ್ರತ್ಯಸ್ತ್ರ ಬಿಟ್ಟಿದೆ. ಅಸ್ತ್ರಕ್ಕೆ ಪ್ರತ್ಯಸ್ತ್ರ ಎಂಬಂತೆ ಲಿಂಗಾಯತ ಪ್ರಾತಿನಿಧ್ಯತೆ ವಿಷಯ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಚರ್ಚೆ ವಿಷಯವಾಗಿದೆ. ರಾಜ್ಯ ರಾಜಕಾರಣದಲ್ಲಿ ಇದೊಂದು ಹೊಸ ಬೆಳವಣಿಗೆ ಎನ್ನಬಹುದು. ವಿರೇಂದ್ರ ಪಾಟೀಲ ಹೆಸರು ಉಲ್ಲೇಖಿಸುತ್ತ ಜಿಲ್ಲೆಯಲ್ಲಿ "ಪಾಟೀಲ' ವಸ್ಸ "ಪಾಟೀಲ' ವಾಕ್ಸಮರ ಶುರುವಾಗಿದೆ.
ಅಂದಹಾಗೆ ಕಾಂಗ್ರೆಸ್ಸಿನ ಮಾಜಿ ಸಿಎಂ ವೀರೇಂದ್ರ ಪಾಟೀಲ ಯಾರು? ಅಂದಿನ ರಾಜಕಾರಣ ಏನಾಗಿತ್ತು? 1989ರ ನಂತರ ವೀರಶೈವ ಕಾಂಗ್ರಸ್ಸೇತರ ಪಕ್ಷಗಳತ್ತ ವಾಲಿದ್ದು ಏತಕ್ಕೆ? ತದನಂತರ ಬಿ.ಎಸ್. ಯಡಿರೂಪ್ಪ ಪ್ರವರ್ಧಮಾನಕ್ಕೆ ಬಂದಿದ್ದು ಹೇಗೆ ಎಂಬುದು ಈಗಿನ ಹೊಸ ಪಿಳೀಗೆಗೆ ಬಾಗಶಃ ಗೊತ್ತಿಲ್ಲ.
ವಿರೇಂದ್ರ ಪಾಟೀಲ ರಾಜೀನಾಮೆ:
ಮೂರು ದಶಕಗಳ ಹಿಂದಿನ ಟನೆ ಪ್ರಸಕ್ತ ಕರ್ನಾಟಕದ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಪ್ರಮುಖ ಚರ್ಚೆಯಾಗಿ ಮಾರ್ಪಟ್ಟಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬೆಂಬಲ ಸಂಗ್ರಹಿಸಲು 1989, ಅಕ್ಟೋಬರ್ 3 ರಂದು ನಡೆದ ಬಿಜೆಪಿ ರಥಯಾತ್ರೆಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ರಾಜಕೀಯ ಬದಲಾವಣೆ ಜರುಗುತ್ತಿದ್ದನ್ನು ನಿಯಂತ್ರಿಸಲು ರಾಜೀವ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದರು. ವಿಮಾನ ನಿಲ್ದಾಣನಿಂದ ಮರಳಿ ದೆಹಲಿಗೆ ಹೊರಟಿದ್ದ ಸಂದರ್ಭದಲ್ಲಿ ರಾಜೀವ ಗಾಂಧಿ ನೀಡಿದ್ದ ಸೂಚನೆ ಮೇರೆಗೆ ಅಂದಿನ ಕರ್ನಾಟಕ ಸಿಎಂ ವೀರೇಂದ್ರ ಪಾಟೀಲ್ ಅವರನ್ನು ಕಾಂಗ್ರೆಸ್ ಪಕ್ಷ ಏಕಾಏಕಿ ಸಿಎಂ ಸ್ಥಾನದಿಂದ ತೆಗದುಹಾಕಿತ್ತು. ವಿರೇಂದ್ರ ಪಾಟೀಲರಿಗೆ ಮಾಹಿತಿ ನೀಡದೇ ಅವರ ಅನಾರೋಗ್ಯದ ಕಾರಣ ನೆಪವೊಡ್ಡಿ, ಅವರನ್ನು ಸಿಎಂ ಸ್ಥಾನದಿಂದ ತೆಗೆದು ಹಾಕಿದ್ದನ್ನು ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಒಳಗೊಂಡಂತೆ ಪಾತೀತವಾಗಿ ಖಂಡಿಸಿದ್ದರು. ಅದರಲ್ಲಿ ಪ್ರಮುಖರು ರಾಮಕೃಷ್ಣ ಹೆಗಡೆ ಅವರೂ ಒಬ್ಬರು.
1989ರಿಂದಲೂ ಇಂದಿನ ವರೆಗೂ ಕಾಂಗ್ರೆಸ್ ಪಕ್ಷ ಪಕ್ಷ ವೀರಶೈವ ಲಿಂಗಾಯತರ ವಿರೋಧಿ ಹಣೆ ಪಟ್ಟಿ ಕಟ್ಟಿಕೊಂಡಿದೆ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. 2018ಕ್ಕೂ ಮೊದಲು ಎಂ.ಬಿ. ಪಾಟೀಲ ಮತ್ತು ವಿನಯ ಕುಲಕಣಿರ್ ನೇತೃತ್ವದಲ್ಲಿ ನಡೆದ ಪ್ರತ್ಯೇಕ ಲಿಂಗಾಯತ ಧರ್ಮ ಪ್ರಕರಣದಲ್ಲಿ ಕಾಂಗ್ರೆಸ್ಸಿನ ಲಿಂಗಾಯತ ವಿರೋಧಿ ಪಟ್ಟ ಮತ್ತಷ್ಟು ಗಟ್ಟಿಯಾಗಿಸಿತು ಎಂಬುದು ವಿಶ್ಲೇಷಕರ ಅಭಿಪ್ರಾಯ. ಮೂರು ದಶಕಗಳ ರಾಜಕೀಯವಾಗಿ ಕಾಂಗ್ರೆಸ್ಸಿಗೆ ಆದ ಹಾನಿ ಇಂದಿಗೂ ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿರೋಧಿ ಬಣ ಇಬ್ಬಾಗ ಆದಾಗಲೆಲ್ಲ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಅಂಕಿ ಅಂಶಗಳು ಹೇಳುತ್ತವೆ. 1994 - 1999 ಅವಧಿಯಲ್ಲಿ ಜನತಾದಳ ಇಬ್ಬಾಗವಾದ ನಂತರ ಎಸ್.ಎಂ ಕೃಷ್ಣ ಸರ್ಕಾರ, 2013ರಲ್ಲಿ ಬಿಜೆಪಿ-ಕೆಜೆಪಿ-ಬಿಎಸ್ಆರ್ ಭಾಗವಾಗಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರ ಕಂಡಿದ್ದನ್ನು ನೋಡಬಹುದು.
ಬಿಎಸ್ವೈ ಮುನ್ನೆಲೆಗೆ:
1989ರ ನಂತರ ರಾಜಕೀಯದಲ್ಲಿ ಲಿಂಗಾಯತರ ರಿಕ್ತಸ್ಥಾನವನ್ನು ತುಂಬಿದವರು ಬಿ.ಎಸ್. ಯಡಿಯೂರಪ್ಪನವರು. 1989ರಲ್ಲಿ ಕೇವಲ 4 ಸ್ಥಾನವಿದ್ದ ಬಿಜೆಪಿ 1994ರಲ್ಲಿ 40ಕ್ಕೇರಿತು. 1999ರಲ್ಲಿ 44 ಕ್ಷೇತ್ರ, 2004ರಲ್ಲಿ 79, 2008ರಲ್ಲಿ 110 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಚುನಾವಣೆಯಿಂದ ಚುನಾವಣೆಗೆ ಲಿಂಗಾಯತರು ಕಾಂಗ್ರಸ್ಸೇತರ ಪಕ್ಷಗಳಿಗೆ ವಾಲಿದಕ್ಕೆ ಇದೊಂದು ಸಾಕ್ಷಿ. ಅದರಲ್ಲಿ ಬಿಜೆಪಿಗೆ ಪ್ರಮುಖವಾಗಿ ವಾಲಿದ್ದನ್ನು ಕಾಣಬಹುದು. ಈ ಹಾನಿ ತಡೆಯಲು ಕಾಂಗ್ರೆಸ್ಸಿಗೆ ಇನ್ನೂ ಸಾಧ್ಯವಾಗುತ್ತಿಲ್ಲ.
ಜಿಲ್ಲೆಯಲ್ಲಿ ಏನಾಗ್ತಿದೆ?
ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ನಂತರ ವೀರಶೈ ಲಿಂಗಾಯತರನ್ನು ಬಿಜೆಪಿ ಕಡೆಗಣಿಸುತ್ತಿದೆ. ಲಿಂಗಾಯತರಿಗೆ ಕಿರುಕಳ ನೀಡಲಾಗುತ್ತಿದೆ ಎಂದು ಎಚ್.ಕೆ. ಪಾಟೀಲ ಆರೋಪಿಸಿದರೆ, ಸಿದ್ದರಾಮಯ್ಯ ವೀರಶೈವ ಲಿಂಗಾಯತ ವಿರೋಧಿ, ಪ್ರತ್ಯೇಕ ಲಿಂಗಾಯತ ಧರ್ಮ ಪ್ರತಿಭಟನೆ ಹುಟ್ಟುಹಾಕಿ ಕೈಸುಟ್ಟುಕೊಂಡರು ಎಂದು ಆರೋಪಿಸುತ್ತಿದ್ದಾರೆ. ಅಸ್ತ್ರಕ್ಕೆ ಪ್ರತ್ಯಸ್ತ್ರ ನೀಡುತ್ತ ಚುನಾವಣೆ ಪ್ರಚಾರಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ.