ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ

New Varur
Published on

ಹುಬ್ಬಳ್ಳಿ : ಸಮೀಪದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ 2025ರ ಜನವರಿ 15 ರಿಂದ 26ರವರೆಗೆ ಭಗವಾನ್ ಪಾರ್ಶ್ವನಾಥ ತೀರ್ಥಂಕರರ ಮಹಾಮಸ್ತಕಾಭಿಷೇಕ ಹಾಗೂ ಮಹಾಮೇರು ಸುಮೇರು ಪರ್ವತದಲ್ಲಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ.

ನವಗ್ರಹ ತೀರ್ಥಕ್ಷೇತ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮಹಾಮಸ್ತಕಾಭಿಷೇಕದ ದಿನಾಂಕ ಘೋಷಿಸಿದರು.

ದೇಶಕ್ಕೆ ಆಧ್ಯಾತ್ಮಿಕ ಶಕ್ತಿಯ ಅಗತ್ಯವಿದೆ. ಹಿಂಸೆ, ಭಯೋತ್ಪಾದನೆ, ಅಪಾಯಕಾರಿ ಚಟುವಟಿಕೆಗಳು ನಿಲ್ಲಬೇಕು. ಎಲ್ಲೆಡೆ ಶಾಂತಿ, ನೆಮ್ಮದಿ ನೆಲೆಯೂರಬೇಕು. ದೇಶ ಅಭಿವೃದ್ಧಿಗೊಳ್ಳಬೇಕು ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದ ಮಹಾರಾಜರು ಆಶೀರ್ವಚನ ನೀಡಿ, 12 ವರ್ಷಗಳ ನಂತರ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ ನಡೆಯುತ್ತಿದೆ ಎಂದರು.

ಈ ಹನ್ನೊಂದು ದಿನಗಳಲ್ಲಿ ಜೈನ ಸಾಹಿತ್ಯ ಸಮ್ಮೇಳನ, ಸಂತರಿಂದ ಜ್ಞಾನ ಬೋಧನೆ, ಸಾಮೂಹಿಕ ವಿವಾಹ, ಅನ್ನಸಂತರ್ಪಣೆ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ರಾಷ್ಟ್ರಪತಿ, ರಾಜ್ಯಪಾಲರು, ಕೇಂದ್ರ ಹಾಗೂ ರಾಜ್ಯದ ಗೃಹ ಸಚಿವರು, ಮುಖ್ಯಮಂತ್ರಿ ಸೇರಿದಂತೆ ವಿವಿಧ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ಜ. 26ರಂದು ನವಗ್ರಹ ತೀರ್ಥಕ್ಷೇತ್ರದ ಆವರಣದಲ್ಲಿರುವ 405 ಅಡಿ ಎತ್ತರದ ಸುಮೇರು ಶಿಖರ ಮಾದರಿಯ ಕಟ್ಟಡದ ಮೇಲೆ ರಾಷ್ಟ್ರಧ್ವಜರೋಹಣ ಮಾಡಲಾಗುವುದು. ಅಂದು 108 ವನಸ್ಪತಿಗಳಿಂದ ಮಹಾಯಜ್ಞ ನಡೆಯಲಿದೆ. 200 ಪಂಡಿತರು ಧಾರ್ವಿುಕ ಕಾರ್ಯಕ್ರಮ ನಡೆಸಿಕೊಡುವರು ಎಂದು ಹೇಳಿದರು.

ದೇಶ ಆತಂಕ ಮುಕ್ತವಾಗಬೇಕು. ಮಹಾಮಾರಿ ಕೋವಿಡ್​ನಂತಹ ಮಾರಕ ರೋಗಳು ಮತ್ತೆ ಉದ್ಭವಿಸಬಾರದು. ದೇಶ ಕಲ್ಯಾಣವಾಗಬೇಕು ಎಂಬ ಹಲವಾರು ಮಹತ್ತರ ಉದ್ದೇಶಗಳ ಈಡೇರಿಕೆಗಾಗಿ ಮಹಾಮಸ್ತಕಾಭಿಷೇಕ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಶ್ರೀ ಧರ್ಮಸೇನ ಭಟ್ಟಾರಕರು, ಶಾಸಕ ಎಂ.ಆರ್. ಪಾಟೀಲ, ಮಹೇಂದ್ರ ಸಿಂಘಿ, ಶಾಂತಿನಾಥ ಹೋತಪೇಟೆ, ಭರತ ಬನವಾನಿ, ಅರುಣ ಎಲೆಗುದರಿ, ಎ.ಸಿ. ಪಾಟೀಲ, ಭಗವಂತ ಯಂಕಣ್ಣವರ, ದೇವೇಂದ್ರ ಕಾಗೇನವರ, ರಾಜೇಂದ್ರ ಬೀಳಗಿ, ವಿದ್ಯಾಧರ ಪಾಟೀಲ, ಪಾರೀಶ ಉಗಾರೆ, ಜಿ.ಬಿ. ಲೋಬೋಗೋಳ, ಮಹಾವೀರ ನಿಲಜಗೆ ಹಾಗೂ ಇತರರು ಇದ್ದರು.

ಬಾಕ್ಸ್

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಗೃಹಲಕ್ಷ್ಮೀಯಂತಹ ಉತ್ತಮ ಯೋಜನೆಗಳನ್ನು ಜಾರಿಗೆ ತಂದಿರುವುದು ಶ್ಲಾಘನೀಯ. ಆದರೆ, ಸರ್ಕಾರ ಮದ್ಯಪಾನಕ್ಕೆ ಪ್ರೋತ್ಸಾಹ ನೀಡಬಾರದು. ಅದರ ಬದಲು ಪ್ರತಿ ಕುಟುಂಬಕ್ಕೆ ನಿತ್ಯ ಒಂದು ಲೀಟರ್ ಹಾಲು ಕೊಡಬೇಕು. ಇದರಿಂದ ಕುಟುಂಬದ ಜನರ ಆರೋಗ್ಯ ಸುಧಾರಿಸುತ್ತದೆ ಎಂದು ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಹೇಳಿದರು.

ಕೋಟ್

ಯುವಕರನ್ನು ದುಶ್ಚಟಗಳಿಂದ ದೂರ ಮಾಡುವ ಉದ್ದೇಶದಿಂದ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ 5,555 ಯುವಕರಿಗೆ ನಿರ್ವ್ಯಸನ ವೃತ ಸಂಸ್ಕಾರ ನೀಡಲಾಗುವುದು. ಪಾಲಕರು ತಮ್ಮ ಮನೆಯ ಯುವಕರನ್ನು ನವಗ್ರಹ ತೀರ್ಥಕ್ಷೇತ್ರಕ್ಕೆ ಕರೆದುಕೊಂಡು ಬಂದು, ಅವರಿಗೆ ವೃತ ಕೊಡಿಸಬೇಕು.

- ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net