ವೀರವನಿತೆ ಓಬವ್ವ ಜಯಂತಿಗೆ ಕೋಟೆನಗರಿ ಸಜ್ಜು

CTD 17 Obbavva - Obbavva Circle--11
Published on

ಚಿತ್ರದುರ್ಗ:  ಐತಿಹಾಸಿಕ ಕೋಟೆನಾಡಷ್ಟೇ ಅಲ್ಲ. ಇಡೀ ರಾಜ್ಯದಲ್ಲಿ ಅಚ್ಚಳಿಯದೆ ಅಜರಾಮರವಾಗಿ ಉಳಿದಿರುವ ವೀರನಾರಿ, ತ್ಯಾಗಮಯಿ, ರಾಜನಿಷ್ಠೆಗೆ ಪಾತ್ರಳಾದ ಒನಕೆ ಓಬವ್ವಳ ರಾಜ್ಯಮಟ್ಟದ ಮೊಟ್ಟಮೊದಲ ಜಯಂತಿಗೆ ಕೋಟೆನಗರಿ ಸಜ್ಜಾಗಿದೆ.

ಭಾನುವಾರ ನಡೆಯಲಿರುವ ಜಯಂತಿ ಅಂಗವಾಗಿ ಶನಿವಾರ ರಾಜವೀರ ಮದಕರಿನಾಯಕ, ಓಬವ್ವಳ ಕಂಚಿನ ಪ್ರತಿಮೆಗೆ ವಿದ್ಯುದ್ದೀಪಾಲಂಕಾರದಿಂದ ಸಿಂಗರಿಸಲಾಗಿದೆ.

ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ, ದಾಸಶ್ರೇಷ್ಠ ಕನಕದಾಸರ ಪ್ರತಿಮೆ, ಗಾಂಧಿವೃತ್ತವನ್ನು ಕೇಸರಿ ಬಟ್ಟೆಯಿಂದ ಅಲಂಕರಿಸಲಾಗಿದೆ. ನಗರದ ಬಿ.ಡಿ.ರಸ್ತೆ ಮಾರ್ಗದುದ್ದಕ್ಕೂ ಓಬವ್ವ ಭಾವಚಿತ್ರದೊಂದಿಗೆ ಜಯಂತಿಗೆ ಶುಭ ಕೋರುತ್ತಿರುವ ಫ್ಲೇಕ್ಸ್, ಬ್ಯಾನರ್ ರಾರಾಜಿಸುತ್ತಿವೆ.

ಕಾರ್ಯಕ್ರಮಕ್ಕೆ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಬೃಹತ್ ಪೆಂಡಾಲ್ ತಲೆ ಎತ್ತಿದ್ದು, ವೇದಿಕೆ ನಿರ್ಮಿಸಲಾಗಿದೆ. ಓಬವ್ವಳಾಗಲು ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 500ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕೈಯಲ್ಲಿ ಒನಕೆಯನ್ನಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ 1 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದ್ದು, 600ಕ್ಕೂ ಹೆಚ್ಚು ಬಸ್, ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ಹಳ್ಳಿಗಳಿಂದ ಬರುವವರಿಗಾಗಿ 100 ಕ್ರೂಸರ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಪಾರ ಸಂಖ್ಯೆಯಲ್ಲಿ ಜನ ಸೇರುವ ಕಾರಣ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರಾಗೃಹ ರಸ್ತೆ, ಹಳೆ ಬೆಂಗಳೂರು ರಸ್ತೆ, ಚಂದ್ರವಳ್ಳಿ ಮತ್ತು ಎಪಿಎಂಸಿ ಮೈದಾನದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಸೂಕ್ತ ಪೊಲೀಸ್ ಬಂದೋಬಸ್ತ್‌ಗಾಗಿ ಇಲಾಖೆ ಶನಿವಾರದಿಂದಲೇ ಸಜ್ಜಾಗಿದೆ.

ಸಾವಿರಾರು ಜನರಿಗೆ ಊಟದ ವ್ಯವಸ್ಥೆ

ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರಿಗಾಗಿ ಬೆಳಗ್ಗೆ 9ಕ್ಕೆ ಉಪ್ಪಿಟ್ಟು-ಕೇಸರಿಬಾತು ಉಪಹಾರದ ವ್ಯವಸ್ಥೆಯನ್ನು ಕನಕ ವೃತ್ತ ಹಾಗೂ ಪೆಂಡಾಲ್ ಬಳಿ ಮಾಡಲಾಗಿದೆ. ಪೆಂಡಾಲ್ ಸಮೀಪವಿರುವ ಹೆಲಿಪ್ಯಾಡ್ ಬಳಿ ಮಧ್ಯಾಹ್ನ 12ರ ನಂತರ 50 ಸಾವಿರಕ್ಕೂ ಹೆಚ್ಚು ಜನರಿಗೆ ಪಲಾವ್, ಮೊಸರು ಬಜ್ಜಿ, ಜಿಲೇಬಿ, ಮೈಸೂರು ಪಾಕ್, ಮೆಣಸಿನಕಾಯಿ ಜತೆಗೆ ಕುಡಿಯಲು ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಅಡುಗೆ ಭಟ್ಟರು, ಸಹಾಯಕರು, ಸ್ವಚ್ಛಗೊಳಿಸುವವರು ಸೇರಿ 300ಕ್ಕೂ ಹೆಚ್ಚು ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಊಟಕ್ಕಾಗಿ 40 ಕೌಂಟರ್ ನಿರ್ಮಿಸಲಾಗಿದ್ದು, ಅದರಲ್ಲಿ ಮಹಿಳೆಯರಿಗಾಗಿ 10 ಕೌಂಟರ್ ಮೀಸಲಿಡಲಾಗಿದೆ.

*ಸಿಎಂ ಬೊಮ್ಮಾಯಿ ಉದ್ಘಾಟನೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ, ಮೈಸೂರು ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಸಿದ್ದಯ್ಯನಕೋಟೆ ವಿಜಯಮಹಾಂತೇಶ್ವರ ಶಾಖಾಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಚನ್ನೇನಹಳ್ಳಿ ಛಲವಾದಿ ಗುರುಪೀಠದ ಶ್ರೀ ಬಸವಲಿಂಗಮೂರ್ತಿ ಶರಣರು ನೇತೃತ್ವ ವಹಿಸುವರು. ಹಂಪಿ ಕನ್ನಡ ವಿವಿ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಚೆಲುವರಾಜು ವಿಶೇಷ ಉಪನ್ಯಾಸ ನೀಡುವರು. ಸಹ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಬರೆದಿರುವ ಸಾಂಸ್ಕೃತಿಕ ನಾಯಕಿ ಒನಕೆ ಓಬವ್ವ, ಹೇಮಂತ್‌ಕುಮಾರ್ ರಚಿಸಿರುವ ವೀರವನಿತೆ ಓನಕೆ ಓಬವ್ವ ಪುಸ್ತಕ ಇದೇ ವೇಳೆ ಬಿಡುಗಡೆಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net