

ಶನಿವಾರಸಂತೆ: ವೀರಶೈವ-ಲಿಂಗಾಯತ ಸಮಾಜ ಇಡೀ ಮನುಕುಲ ಅಭಿವೃದ್ಧಿಗಾಗಿ ತನ್ನದೇ ಆದ ಕೊಡುಗೆ ನೀಡಿದೆ ಎಂದು ವಿರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಗುಡುಗಳಲೆ ಜಾತ್ರಾ ಮೈದಾನದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಕೊಡಗು ಜಿಲ್ಲಾ ಘಟಕ ಹಾಗೂ ಯುವ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ದೊಡ್ಡವೀರ ರಾಜೇಂದ್ರ ಒಡೆಯರ್ ಜಿಲ್ಲಾ ಮಟ್ಟದ ಕ್ರೀಡಾಕೂಟದ ಉದ್ಘಾಟನೆ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತಿಚಿನ ದಿನಗಳಲ್ಲಿ ವೀರಶೈವ-ಲಿಂಗಾಯತ ಸಮಾಜವು ಸಮುದಾಯದ ಬೆಳವಣಿಗೆಗೆ ಸಂಘಟಾತ್ಮಕ ಕಾರ್ಯಕ್ರಮ, ಕ್ರೀಡಾಕೂಟ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಸದೃಢ ಸಮಾಜದ ನಿರ್ಮಾಣಕ್ಕೆ ಕ್ರೀಡಾಕೂಟಗಳ ಸಹಕಾರಿ. ಯುವ ಸಮೂಹ ಕ್ರೀಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕಿದೆ ಎಂದರು.
ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಸದೃಢ ಯುವ ಸಮಾಜದಿಂದ ಸಮಾಜ ಮತ್ತು ರಾಷ್ಟ್ರ ಬೆಳವಣಿಗೆಯಾಗುತ್ತದೆ. ಈ ನಿಟ್ಟಿನಲ್ಲಿ ವೀರಶೈವ ಸಮಾಜವು ಜಿಲ್ಲೆಯ ಇತರ ಸಮಾಜವು ನಡೆಸಿಕೊಂಡು ಬರುತ್ತಿರುವಂತೆ ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದು ಸಮಾಜ ಮತ್ತು ದೇಶದ ಬೆಳವಣಿಗೆಗೆ ಪೂರಕ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕಲ್ಲುಮಠದ ಮಹಾಂತ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಅಧ್ಯಕ್ಷ ಎಚ್.ವಿ.ಶಿವಪ್ಪ, ಮಹಿಳಾ ಘಟಕದ ಮಮತಾ ಸತೀಶ್ ಮಾತನಾಡಿದರು. ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಪ್ರಸ್ತಾವಿಕ ನುಡಿಗಳನ್ನಾಡಿದರು.
ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಮಹಾಸಭಾದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್, ಯುವ ಘಟಕದ ಅಧ್ಯಕ್ಷ ಮೋಕ್ಷಿತ್‌ರಾಜ್, ವೀರಶೈವ ಸಮಾಜದ ಪ್ರಮುಖರಾದ ಡಿ.ಬಿ.ಧರ್ಮಪ್ಪ, ಜಿ.ಎಂ.ಕಾಂತರಾಜು, ಆದರ್ಶ್, ಪ್ರದೀಪ್, ಸುಶೀಲಮ್ಮ, ರಾಜೇಶ್ವರಿ ನಾಗರಾಜ್, ರೇಣುಕಾ ಪ್ರಸನ್ನ ಇತರರು ಇದ್ದರು.