

ಮೈಸೂರು: ವೀರಶೈವ ಲಿಂಗಾಯತ ಸಮುದಾಯಕ್ಕೆ ತನ್ನದೇ ಆದ ಭವ್ಯವಾದ ಇತಿಹಾಸವಿದ್ದು, ಸಮಾಜದ ಸರ್ವರನ್ನು ಸಮಾನವಾಗಿ ಕಾಣ ಬೇಕು ಮತ್ತು ಕಾಣಲು ಅವಕಾಶ ಇದೆ ಅವಕಾಶ ಇದೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಧರ್ಮ ಇದು ಎಂಬುದನ್ನು ಯಾರು ಸಹ ಮರೆಯಬಾರದು ಎಂದು ಶ್ರೀ ಸೂತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
‘ವಿಜಯಾನಂದ್ ಟ್ರಾವೆಲ್ಸ್’ ಪ್ರಸ್ತುತಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಂ.1 ಕನ್ನಡ ದೈನಿಕ ‘ವಿಜಯವಾಣಿ’ ಮಾಧ್ಯಮ ಸಹಯೋಗದೊಂದಿಗೆ ಆಯೋಜಿಸಿರುವ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್‌ಅನ್ನು ಉದ್ಘಾಟಿಸಿ ಮಾತನಾಡಿದರು.
ಒಳಪಂಗಡ ಕುರಿತು ಸಮಾವೇಶದಲ್ಲಿ ಸಾಕಷ್ಟು ಗಣ್ಯರು ಪ್ರಸ್ತಾಪಿಸಿದ್ದಾರೆ. ಒಳಪಂಗಡಗಳು ಇರಬಾರದು ಎಂದು ಎಲ್ಲರು ಬಯಸುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುವ ಅವಶ್ಯಕತೆ ಇದೆ. ಜಾತೀಯತೆಯನ್ನು ಹೋಗಲಾಡಿಸುವಂತಹ ಸಮಾಜ ನಿರ್ಮಾಣವಾಗಬೇಕು ಎಂಬ ಉದ್ದೇಶದಿಂದಲೇ ವೀರಶೈವ ಲಿಂಗಾಯತ ಸಮಾಜ ನಿರ್ಮಾಣವಾಯಿತು. ಆ ಕಾರಣಕ್ಕೆ ಬಸವಣ್ಣ ಅವರು ಜನರಿಗೆ ಇಷ್ಟಲಿಂಗ ನೀಡಿದರು. ಇಷ್ಟಲಿಂಗ ಒಂದು ಧಾರ್ಮಿಕ ಸಂಕೇತ ಮಾತ್ರವಲ್ಲ, ಅದೊಂದು ಸಾಮಾಜಿಕ, ಸಮಾನತೆ ಹಾಗೂ ಆರ್ಥಿಕ ಸಮಾನತೆಯ ಸಂಕೇತವಾಗಿದೆ ಎಂದರು.
ಬೆಂಕಿಗೆ ಯಾವುದೇ ಮರವನ್ನು ಹಾಕಿದರೂ ಅದು ಸುಟ್ಟು ಬೂದಿಯಾಗುತ್ತದೆ. ಒಮ್ಮೆ ಬೂದಿಯಾದರೆ ಅದು ಯಾವ ಮರದ ಬೂದಿ ಎಂದು ತಿಳಿಯುವುದಿಲ್ಲ. ಹಾಗಾಗಿ ಲಿಂಗಧಾರಣೆಯಾದವರು ವೀರಶೈವ ಲಿಂಗಾಯತ ಸಮಾಜಕ್ಕೆ ಸೇರಿದ ನಂತರ ಬೂದಿಯ ರೀತಿಯಲ್ಲಿ ಒಂದಾಗಬೇಕು. ಆ ಮೂಲಕ ಸಮಾಜವನ್ನು ಕಟ್ಟಬೇಕು. ಇಷ್ಟನ್ನು ಅರ್ಥಮಾಡಿಕೊಂಡರೆ ಸಮಾಜ ಸಮೃದ್ಧವಾಗಿ ಬೆಳೆಯಲು ಸಾಧ್ಯವಾಗುತ್ತದೆ. ರಾಜಕೀಯ, ಸಾಮಾಜಿಕ, ಆರ್ಥಿಕ ಕಾರಣಗಳಿಗಾಗಿ ಒಳಪಂಗಡಗಳು ಹರಿದು ಹಂಚಿಹೋಗುವ ಬದಲು ವ್ಯವಸ್ಥಿತವಾಗಿ ಒಂದಾಗಿ ಬೆಳೆಯಬೇಕು ಎಂದು ಕರೆ ನೀಡಿದರು.
ಉದ್ಯಮ ನಡೆಸುವವರ ಹಾದಿ ಸುಖಕರವಾಗಿ ಇರುವುದಿಲ್ಲ. ಉದ್ಯಮದಲ್ಲಿ ಸಾಕಷ್ಟು ಸಮಸ್ಯೆಗಳು, ಸವಾಲುಗಳು ಎದುರಾಗುತ್ತದೆ. ಈ ಸಮಸ್ಯೆಗಳನ್ನು ಬಗೆಹರಿಸಲು ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ಒಂದು ವೇದಿಕೆ ನಿರ್ಮಿಸಿದರೆ ಈ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿದೆ. ಅಲ್ಲದೆ, ಉದ್ಯಮ ನಡೆಸುವವರಿಗೆ ಅನುಕೂಲವಾಗುತ್ತದೆ. ನಮ್ಮ ಗ್ರಾಮೀಣ ಜನರು ಸಹ ಬೆಳೆಯಬೇಕು, ಅವರಿಗೆ ಹೆಚ್ಚಿನ ಅವಕಾಶ ದೊರೆಯಬೇಕು. ಈ ನಿಟ್ಟಿನಲ್ಲಿ ಸಂಸ್ಥೆಯು ಮಾರ್ಗದರ್ಶನ ಮಾಡಬೇಕು ಎಂದು ಸಲಹೆ ನೀಡಿದರು.