ಎಲ್ಲರನ್ನೂ ಅಪ್ಪಿಕೊಳ್ಳುವ ವೀರಶೈವ ಮತ

7MDG1 JAYANTI
Published on

ಮುಂಡರಗಿ: ಜಗದ್ಗುರು ರೇಣುಕಾಚಾರ್ಯರು ಎಲ್ಲರಿಗೂ ಒಳಿತನ್ನು ಮಾಡುವಂತ, ಎಲ್ಲರನ್ನು ಅಪ್ಪಿಕೊಳ್ಳುವಂತ ವೀರಶೈವ ಮತ ಎಂಬ ಪರಂಪರೆಯನ್ನು ಭೂಲೋಕದಲ್ಲಿ ಸ್ಥಾಪನೆ ಮಾಡಿದ್ದಾರೆ. ಜಾತಿ ಇಲ್ಲದೇ ಜ್ಯೋತಿ ಬೆಳಗಿದವರು ರೇಣುಕಾಚಾರ್ಯರು. ಜಗತ್ತಿನಲ್ಲಿ ಎಲ್ಲರನ್ನೂ ಮಿತ್ರ ರೂಪದಲ್ಲಿ ಕಾಣುವುದು ವೀರಶೈವ ಮತ ಎಂದು ಹಂಪಸಾಗರದ ಶ್ರೀ ರುದ್ರಮುನಿ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಶ್ರೀ ವೀರಮಾಹೇಶ್ವರ ಜಂಗಮಾಭಿವೃದ್ಧಿ ಸಂಘದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ರೇಣುಕಾಚಾರ್ಯರ ತತ್ವ ಸಿದ್ಧಾಂತ, ಬೋಧನೆ ಸಂದೇಶವನ್ನು ಅರಿಯುವಂತ ಚಿಂತನೆ ಹೊಂದಬೇಕು. ಅವರ ತತ್ವ ಸಿದ್ಧಾಂತವು ಪ್ರತಿಯೊಬ್ಬರ ಮನದೊಳಗೆ, ಮನೆಯೊಳಗೆ ಮತ್ತು ಆಚರಣೆಗೆ ಬಂದರೆ ಇಡೀ ಜಗತ್ತೇ ಜಯಂತಿ ಆಚರಿಸುತ್ತದೆ. ಯಾರನ್ನೂ ಖಂಡಿಸದೇ ಬೇಧ- ಭಾವ ತಾಳಲಾರದೆ ಅಮೂಲ್ಯ ಸಂದೇಶ ನೀಡಿದ್ದಾರೆ. ಮಠ-ಮಾನ್ಯಗಳಲ್ಲಿ ಜಾತಿ ಜನಾಂಗವೆನ್ನದೆ ಎಲ್ಲರಿಗೂ ಮುಕ್ತ ಅವಕಾಶ ನೀಡಿ ಶಿಕ್ಷಣ ನೀಡಿದರು. ಶಿಕ್ಷಣ, ಬೋಧನೆ, ಜ್ಞಾನವೆಂಬ ಬೆಳಕಿಗೆ ಅಡೆತಡೆಗಳಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ವೇ.ಮೂ. ಗುರುಮೂರ್ತಿಸ್ವಾಮಿಗಳು ಅಳವಂಡಿ ಮಾತನಾಡಿ, ಜಂಗಮರು ದೈವಸ್ವರೂಪಿಯಾಗಿದ್ದು, ಸಮಾಜವನ್ನು ಸರಿ ದಾರಿಗೆ ಕರೆದುಕೊಂಡು ಹೋಗುವ ಕಾರ್ಯವಾಗಬೇಕು. ನಾವೆಲ್ಲ ಹಿರಿಯರು ಮಕ್ಕಳಿಗೆ ನಮ್ಮ ಸಂಸ್ಕೃತಿ ಕಲಿಸಬೇಕು. ರೇಣುಕಾಚಾರ್ಯರು ಒಂದೇ ಜಾತಿಗೆ ಸಿಮೀತವಲ್ಲ, ಅವರು ಇಡೀ ನಾಡಿನ ಗುರುಗಳು ಎಂದರು.

ಸಾನ್ನಿಧ್ಯ ವಹಿಸಿದ್ದ ಕಲಕೇರಿ-ವಿರೂಪಾಪೂರದ ಶ್ರೀ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಿರೇವಡ್ಡಟ್ಟಿಯ ಶ್ರೀ ವೀರೇಶ್ವರ ಶಿವಾಚಾರ್ಯ ಸ್ವಾಮೀಜಿ, ದೈಹಿಕ ಶಿಕ್ಷಣ ಶಿಕ್ಷಕಿ ಸುನಿತಾ ಹಿರೇಮಠ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಎಸ್.ಎಸ್.ಹಿರೇಮಠ, ಷಡಕ್ಷರಯ್ಯ ಹಿರೇಮಠ, ಡಾ.ಕುಮಾರಸ್ವಾಮಿ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಹೊರಟ ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆಗೆ ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳು ಚಾಲನೆ ನೀಡಿದರು

ವಿ.ಜೆ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಸ್ವತಿ ಹಿರೇಮಠ ಸ್ವಾಗತಿಸಿದರು. ಶಕುಂತಲಾ ಹಂಪಿಮಠ ನಿರೂಪಿಸಿದರು. ಲತಾ ಅಮರಗೋಳಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net