ವೀರಶೈವ ಪಂಚಸೂತ್ರಾಣಿ ಕೃತಿ ಲೋಕಾರ್ಪಣೆ ನಾಳೆ

kashi
Published on

ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಉತ್ತರ ಪ್ರದೇಶ ವಾರಾಣಾಸಿಯ ಕಾಶಿ ಜ್ಞಾನ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಬರೆದಿರುವ ವೀರಶೈವ ಪಂಚಸೂತ್ರಾಣಿ ಕೃತಿ ಜ.೮ರಂದು ಸಂಜೆ ೬ಕ್ಕೆ ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಲೋಕಾರ್ಪಣೆೆಗೊಳ್ಳಲಿದೆ.

ವಿಶ್ವವಿದ್ಯಾಲಯ ಪಠ್ಯ: ವೀರಶೈವ ಧರ್ಮದ ಪಂಚಪೀಠಗಳಾದ ಶ್ರೀರಂಭಾಪುರಿ, ಶ್ರೀಉಜ್ಜಯಿನಿ, ಶ್ರೀಕೇದಾರ, ಶ್ರೀ ಶ್ರೀಶೈಲ ಹಾಗೂ ಶ್ರೀಕಾಶಿ ಪೀಠಗಳ ಮೂಲ ಸೂತ್ರಗಳಾದ ಕ್ರಮವಾಗಿ ಪಡ್ವಿಡಿ, ವೃಷ್ಟಿ, ಲಂಬನ, ಮುಕ್ತಾಗುಚ್ಛ ಹಾಗೂ ಪಂಚವರ್ಣ ಕುರಿತು ಸಂಪೂರ್ಣ ಸಂಶೋಧನಾ ಗ್ರಂಥವಾಗಿರುವ ವೀರಶೈವ ಪಂಚಸೂತ್ರಾಣಿ ಕೃತಿ ಈಗಾಗಲೇ ಸಂಸ್ಕೃತದಲ್ಲಿ ಪ್ರಕಟಗೊಂಡಿದ್ದು, ವಾರಾಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಧರ್ಮಾಗಮ ವಿಭಾಗದ ಪಠ್ಯವಾಗಿ ಆಯ್ಕೆಯಾಗಿದೆ. ೨೫೩೯ ಸಂಸ್ಕೃತ ಶ್ಲೋಕ ಒಳಗೊಂಡ ಕೃತಿಯ ಕನ್ನಡ ಅನುವಾದ ಇದಾಗಿದೆ.

ಲೋಕಾರ್ಪಣೆ: ಉಜ್ಜಯಿನಿ ಪೀಠದ ಶ್ರೀಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ಹಾಗೂ ಶ್ರೀಶೈಲ ಪೀಠದ ಶ್ರೀ ಜಗದ್ಗುರು ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಜಂಟಿಯಾಗಿ ಕೃತಿ ಲೋಕಾರ್ಪಣೆ ಮಾಡುವರು. ಕೃತಿ ರಚಿಸಿರುವ ಕಾಶಿ ಪೀಠದ ಶ್ರೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹಾಗೂ ಕಾಶಿ ಪೀಠದ ಕಿರಿಯ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಇತರ ಪೂಜ್ಯರು ಪಾಲ್ಗೊಳ್ಳುವರು. ವಿಶ್ರಾಂತ ಪ್ರಾಧ್ಯಾಪಕ ಕೋ.ರಂ.ಬಸವರಾಜು ಕೃತಿ ಪರಿಚಯ ಮಾಡುವರು ಎಂದು ಪಂಚಪೀಠದ ವಾರ್ತಾಧಿಕಾರಿ ಸಿದ್ರಾಮಪ್ಪ ಆಲಗೂಡಕರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net