

ಬೆಂಗಳೂರು: ವೀರಶೈವ ಮತ್ತು ಲಿಂಗಾಯತ ಸಮಾನಾರ್ಥಕ ಪದಗಳಾಗಿದ್ದು, ಕೇಂದ್ರ ಸರ್ಕಾರದ ಪ್ರತ್ಯೇಕ ಮಾನ್ಯತೆ ದೊರೆಯದ ಕಾರಣಕ್ಕೆ ವೀರಶೈವ ಲಿಂಗಾಯತ ಜನಾಂಗವು ಕಾನೂನು ದೃಷ್ಟಿಯಿಂದ ಈಗಲೂ ಹಿಂದು ಧರ್ಮದ ಭಾಗವಾಗಿದೆ. ಆದರೆ ವೀರಶೈವ ಲಿಂಗಾಯತವು ನಿಶ್ಚಿತವಾಗಿ ಒಂದು ಜಾತಿಯಲ್ಲ. ಬದಲಾಗಿ ಹಿಂದು ಧರ್ಮದ ಒಂದು ಪತ್ಯೇಕ ಸಂಪ್ರದಾಯ ಅಥವಾ ಪಂಥ ಅಥವಾ ಪರಂಪರೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಪಂಥಕ್ಕೆ ಹಿಂದು ಧರ್ಮದ ಎಲ್ಲ ಜಾತಿಗಳ ಜನರು ಸೇರಿದ್ದಾರೆ. ತಳ ಸಮುದಾಯದ ಹಲವು ಜಾತಿಯ ಜನರಿದ್ದು, ಈ ಹಿಂದಿನ ಹಾವನೂರು ವರದಿ, ಚಿನ್ನಪ್ಪರೆಡ್ಡಿ ವರದಿಯಲ್ಲಿ ಅದನ್ನು ಸ್ಪಷ್ಟಪಡಿಸಿದ್ದಾರೆ. ಕಳೆದ 10 ವರ್ಷಗಳ ಹಿಂದೆ ಕಾಂತರಾಜ್ ಆಯೋಗ ಸಿದ್ಧಪಡಿಸಿದ್ದ ಸಾಮಾಜಿಕ ಶೈಕ್ಷಣಿಕ ವರದಿಯಲ್ಲಿ ವೀರಶೈವ ಲಿಂಗಾಯತ ಸಮಾಜದ ಉಪಜಾತಿಗಳ ಸ್ಥಿತಿ-ಗತಿ ಬಗ್ಗೆ ನೀಡಿದ್ದ ಮೌಲ್ಯಾಂಕದಲ್ಲಿ ಅಜಗಜಾಂತರ ವ್ಯತ್ಯಾಸಗಳಾಗಿದ್ದು, ಹಿಂದೆ ಮಾಡಿದ್ದ ತಪ್ಪನ್ನೇ ಹಿಂದುಳಿದ ಆಯೋಗ ಮತ್ತೆ ಮಾಡದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.
ಕಳೆದ 50 ವರ್ಷಗಳಿಂದ ಲಿಂಗಾಯತ ಜನಾಂಗದ ಹಿಂದುಳಿದ ಮತ್ತು ಅತಿ ಹಿಂದುಳಿದ ಜನರಿಗೆ ಮೀಸಲಾತಿಯಲ್ಲಿ ಅನ್ಯಾಯವಾಗಿದ್ದು, ಅವರವರ ಉದ್ಯೋಗಾಧಾರಿತವಾಗಿ ಸ್ಥಿತಿಗತಿಗನುಸಾರವಾಗಿ ಮೌಲ್ಯಾಂಕ ನೀಡುವ ಸಂದರ್ಭದಲ್ಲಿ ನ್ಯಾಯಯುತವಾಗಿ ಮೌಲ್ಯಾಂಕ ನೀಡಬೇಕು. ಮೌಲ್ಯಾಂಕ ಆಧರಿಸಿ ಹಿಂದುಳಿದ ಪಟ್ಟಿಯಲ್ಲಿ ಸೇರ್ಪಡೆಯಾಗಿ ಸರಿಯಾದ ಪ್ರವರ್ಗಕ್ಕೆ ಸೇರ್ಪಡೆಯಾಗುವ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗಿದ್ದು ಹಿಂದುಳಿದ ಆಯೋಗದ ಕರ್ತವ್ಯ. ಆದರೆ ಈ ಹಿಂದೆ ಸಮಾನಾರ್ಥಕ ಕಸುಬುಗಳುಳ್ಳ ಜಾತಿ ಹೆಸರುಗಳ ನಡುವೆ ಮೌಲ್ಯಾಂಕ ವ್ಯತ್ಯಾಸಗೊಂಡಿದ್ದು ಸಮುದಾಯಕ್ಕೆ ಆದ ಅನ್ಯಾಯ. ಒಂದೇ ಅರ್ಥದ ವಿವಿಧ ಪದಗಳನ್ನು ನಮೂದಿಸಿ ಪ್ರತ್ಯೇಕ ಕೋಡ್ ಸಂಖ್ಯೆಗಳನ್ನು ಸೃಷ್ಟಿಸಿರುವುದು ಕೂಡಾ ಗೊಂದಲಗಳು ಹೆಚ್ಚಾಗಲು ಕಾರಣ. ಆದ್ದರಿಂದ ಕಾಂತರಾಜ್ ವರದಿಯಲ್ಲಿ ಆದ ಗುರುತರ ಲೋಪದೋಷಗಳು ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಶಂಕರ ಬಿದರಿ ಹಿಂದುಳಿದ ಆಯೋಗವನ್ನು ಒತ್ತಾಯಿಸಿದ್ದಾರೆ.