ವೀರಶೈವ ಲಿಂಗಾಯತರು ಹಿಂದುಗಳೇ

bellad
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಪ್ರತ್ಯೇಕ ವೀರಶೈವ ಲಿಂಗಾಯತ ಧರ್ಮ ಸ್ಥಾಪನೆಯ ವಿಷಯ ಪ್ರಸ್ತಾಪಿಸಿರುವ ಸಚಿವ ಈಶ್ವರ ಖಂಡ್ರೆ ಅವರ ವಿಚಾರವು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಂಪೂರ್ಣ ಸದಸ್ಯರ ಅಭಿಪ್ರಾಯವಲ್ಲ. ಮಹಾಸಭಾವು ಈಶ್ವರ ಖಂಡ್ರೆ ಅವರ ವೈಯಕ್ತಿಕ ಆಸ್ತಿಯೂ ಅಲ್ಲ. ವೀರಶೈವ ಲಿಂಗಾಯತರು ಹಿಂದುಗಳೇ ಎಂಬುದು ನಮ್ಮ ನಿಲುವು ಎಂದು ವಿಧಾನಸಭೆ ವಿಪಕ್ಷ ನಾಯಕ ಅರವಿಂದ ಬೆಲ್ಲದ ಹೇಳಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಯೋಜಿತ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ)ಯ ಹಿಂದಿರುವ ವೀರಶೈವ ಲಿಂಗಾಯತ ಸಮಾಜ ಒಡೆಯುವ ದುಷ್ಟ ವಿಚಾರಗಳನ್ನು ತಿಳಿದುಕೊಳ್ಳಬೇಕು. ಕ್ರಿಶ್ಚಿಯನ್ ಧರ್ಮ, ಮತಾಂತರಕ್ಕ್ಕೆ ಪ್ರೋತ್ಸಾಹ ನೀಡಲು ಹೊಸ ಹೊಸ ಜಾತಿಗಳನ್ನು ಸೃಷ್ಟಿ ಮಾಡಿದ್ದಾರೆ. ಇಂಥ ಸಂದರ್ಭದಲ್ಲಿ ಸಮಾಜದ ಬಾಂಧವರು ಒಂದಾಗಿ ಇರಬೇಕು ಎಂದು ಕರೆ ನೀಡಿದರು.

ಮುಂದಿನ 3-4 ತಿಂಗಳಲ್ಲಿ ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಳ್ಳಲಿದ್ದಾರೆ. ಸಿಎಂ ಸ್ಥಾನ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ನಾಯಕ ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಯಾವುದೇ ಹಂತಕ್ಕೆ ಹೋಗಲು ತಯಾರಿದ್ದೇವೆ ಎಂದು ಸಿಎಂ ತೋರಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮಿರಿದೆ. ಜನರ ಗಮನ ಬೇರಡೆ ಸೆಳೆಯಲು ಬೇರೆ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಜಾತಿಗಣತಿ ಕೂಡ ಜನರ ಗಮನ ಬೇರೆಡೆ ಸೆಳೆಯುವ ತಂತ್ರ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಅವರು ತಮ್ಮ ಜತೆ ಎಡಪಂಥೀಯ ವಿಚಾರಧಾರೆಯುಳ್ಳ ಜನರನ್ನು ಇಟ್ಟುಕೊಂಡಿದ್ದಾರೆ. ಅವರ ಜತೆ ಸೇರಿ ಹಿಂದು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆಯೇ ಲಿಂಗಾಯತ ವೀರಶೈವರನ್ನು ಒಡೆಯುವ ಕೆಲಸ ಮಾಡಿದ್ದರು. ಹಿಂದು ಸಮಾಜವನ್ನು ಒಡೆದು ಹಾಕಬೇಕು. ಹಾಗಾಗಿ ಲಿಂಗಾಯತ ಕ್ರಿಶ್ಚಿಯನ್, ಮಾದಿಗ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್ ಸೇರಿದಂತೆ ಅನೇಕ ಜಾತಿ ಪಟ್ಟಿ ಮಾಡಿದ್ದಾರೆ. ಇದರಿಂದ ಮತಾಂತರಕ್ಕೆ ಅನಕೂಲವಾಗಲಿದೆ. ಹೀಗೆ ಜನರ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಸಂವಿಧಾನದಲ್ಲಿ 6 ಧರ್ಮಗಳಿಗೆ ಮಾನ್ಯತೆ ಇದೆ. ಬೇರೆ ಯಾವುದಕ್ಕೂ ಮಾನ್ಯತೆ ಇಲ್ಲ. ಹಾಗಾಗಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಕಾಲದಲ್ಲಿ ಧರ್ಮದ ಕಾಲಂನಲ್ಲಿ ಹಿಂದು ಎಂದು ಬಳಸಬೇಕು. ಜಾತಿ ಮತ್ತು ಉಪಜಾತಿ ಕಾಲಂ ನಲ್ಲಿ ತಮ್ಮ ತಮ್ಮ ಜಾತಿ-ಉಪ ಜಾತಿಯನ್ನು ನಮೂದಿಸಬೇಕು ಎಂದು ಜನರಲ್ಲಿ ಮನವಿ ಮಾಡುತ್ತಿದ್ದೇವೆ ಎಂದರು.

ಲಿಂಗಾಯತ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಇಲ್ಲದನ್ನು ತಂದು ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. 47 ಜಾತಿಗಳಿಗೆ ಕ್ರಿಶ್ಚಿಯನ್ ಹಣೆಪಟ್ಟಿ ಕಟ್ಟಲು ಹೊರಟಿದ್ದಾರೆ. ಹೊಸ ಜಾತಿಗಳನ್ನು ಸೃಷ್ಟಿಸುವಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ಹಿಂದು ಸಮಾಜ ಒಡೆಯುವುದೇ ಅವರ ಉದ್ದೇಶ. ಆದರೆ, ಇದಕ್ಕೆ ಯಾರೂ ಬಲಿಯಾಗುವುದಿಲ್ಲ. ಕಾಂಗ್ರೆಸ್ ಹಿಂದು ವಿರೋಧಿ ನೀತಿ ಅಳವಡಿಸಿಕೊಂಡಿದೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಎಂ.ಆರ್. ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net