

ಸಕಲೇಶಪುರ: ಸಮಾಜದಲ್ಲಿ ಸಮಾನತೆ ಸ್ಥಾಪಿಸಿದ ಮೊದಲ ಧರ್ಮ ವೀರಶೈವ-ಲಿಂಗಾಯತ ಧರ್ಮ ಎಂದು ಯಸಳೂರು ತೆಂಕಲಗೋಡು ಮಠದ ಶ್ರೀ ಚನ್ನಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಹಾಸನ ಜಿಲ್ಲಾ ವೀರಶೈವ-ಲಿಂಗಾಯತ ಮಹಾಸಭಾ ಭಾನುವಾರ ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಪ್ರಪಂಚದ ಎಲ್ಲ ದೇಶಗಳಲ್ಲೂ ಲಿಂಗ, ಬಣ್ಣ, ಆರ್ಥಿಕ ಅಸಮಾನತೆ ತಾಂಡವವಾಡುತ್ತಿದ್ದ 12ನೇ ಶತಮಾನದಲ್ಲೇ ಸಮಾನತೆ ಸ್ಥಾಪಿಸಿದವರು ಬಸವಣ್ಣ. ಸಮಾಜಕ್ಕೆ ಇಂತಹ ಹಲವು ಮೊದಲುಗಳನ್ನು ನೀಡಿದ್ದು ವೀರಶೈವ-ಲಿಂಗಾಯತ ಧರ್ಮ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ಜಯ ಎಂಬ ಉದ್ಘೋಷಣೆ ಬೇರೆ ಯಾವ ಧರ್ಮದಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.
ನಮ್ಮ ಧರ್ಮ ನಮಗೆ ಸಂಸ್ಕಾರ ಹೇಳಿಕೊಟ್ಟಿರುವಂತೆ ಸ್ವಧರ್ಮ ಪ್ರೀತಿಸಿ, ಅನ್ಯಧರ್ಮವನ್ನು ಗೌರವಿಸಿ ಎಂದು ಸಲಹೆ ನೀಡಿದರು.
ವೀರಶೈವ ಲಿಂಗಾಯತ ಮಠಮಾನ್ಯಗಳು ಇಲ್ಲದ್ದಿದ್ದರೆ ರಾಜ್ಯದಲ್ಲಿ ಅನಕ್ಷರತೆ ತಾಂಡವವಾಡುತ್ತಿತ್ತು. ಇಂದು ರಾಜ್ಯದಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಿರಲು ಮಠಗಳೇ ಕಾರಣ. ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ರಾಜ್ಯ ಸರ್ಕಾರಕ್ಕೆ ಪರ್ಯಾಯವಾಗಿ ಮಠಗಳು ಕೆಲಸ ಮಾಡುತ್ತಿವೆ. ಧರ್ಮದ ಸಿದ್ಧಾಂತಗಳು ಜೀವನದ ಪಾಠ ಕಲಿಸುತ್ತವೆ. ಮಾನವ ಜೀವಮಾನದಲ್ಲಿ ಧರ್ಮಕ್ಕಾಗಿ ಕೆಲ ಕಾಲವನ್ನು ಮೀಸಲಿಡ ಬೇಕು. ಶ್ಲೋಕಗಳನ್ನು ಕೇವಲ ಕೇಳಿ ಬಿಡುವುದಲ್ಲ, ಶ್ಲೋಕಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಪಾವನಗೊಳ್ಳಲಿದೆ ಎಂದು ತಿಳಿಸಿದರು.
ಅರಕಲಗೂಡು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಇತ್ತೀಚಿನ ವರ್ಷಗಳಲ್ಲಿ ಪ್ರತಿಭಾನ್ವಿತರಾಗಿ ಹೊರಹೊಮ್ಮುತ್ತಿದ್ದಾರೆ. ಸರ್ಕಾರ ಇಂತಹ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸುವ ಕೆಲಸಕ್ಕಾಗಿ ನಮ್ಮ ಸಮಾಜವನ್ನು 2ಬಿಗೆ ಸೇರಿಸುವಂತೆ ಆಗ್ರಹಿಸಲಾಗುತ್ತಿದೆ. ಕೇವಲ ಹೆಸರಿಗೆ ವೀರಶೈವ-ಲಿಂಗಾಯತರಾಗದೆ ನಡೆ ನುಡಿಯಲ್ಲಿ ಧರ್ಮವನ್ನು ತೋರಿಸಬೇಕು. ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಕಲಿಸುವ ನಿಟ್ಟಿನಲ್ಲಿ ನಿತ್ಯ ದೇವರ ಪೂಜೆ ಮಾಡುವುದನ್ನು ಕಲಿಸಿದಾಗ ವೃದ್ಧಾಪ್ಯದಲ್ಲಿ ಮಕ್ಕಳು ಸರಿ ಇಲ್ಲ ಎಂಬುದು ತಪ್ಪಲಿದೆ. ಅಂತರಂಗ ಶುದ್ಧಿಗೆ ಪೂಜೆ ಅತ್ಯಗತ್ಯ. ಬಾಲ್ಯದಲ್ಲೇ ಲಿಂಗಸಂಸ್ಕಾರ ನೀಡಿದರೆ ಜೀವನದಲ್ಲಿ ಯಶಸ್ಸು ನಿಮ್ಮನ್ನು ಅರಸಿಕೊಂಡು ಬರಲಿದೆ ಎಂದರು.
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ರೇಣುಕಪ್ರಸನ್ನ ಮಾತನಾಡಿ, ಹಲವು ಕನಸುಗಳನ್ನು ಹೊತ್ತು ಹುಟ್ಟಿದ ಮಹಾಸಭಾ, ಶತಮಾನ ಕಂಡ ನಂತರ ತನ್ನ ಕನಸುಗಳನ್ನು ಈಡೇರಿಸಿಕೊಳ್ಳುತ್ತಿದೆ. ಮಹಾಸಭಾ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹುಟ್ಟು ಹಾಕುತ್ತಿದೆ. ಪ್ರತಿ ಜಿಲ್ಲಾ ಕೇಂದ್ರದಲ್ಲಿ ವೀರಶೈವ-ಲಿಂಗಾಯತ ವಿದ್ಯಾರ್ಥಿನಿಲಯ ಸ್ಥಾಪನೆ ಮಾಡಲಾಗುತ್ತಿದೆ. ಅಲ್ಲದೆ, ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ನಟರಾಜ ಸಾಗರನಹಳ್ಳಿ ಮಾತನಾಡಿ, ವೀರಶೈವ ಲಿಂಗಾಯತರು ಒಂದಾದರೆ ಸರ್ಕಾರಗಳನ್ನೇ ಬದಲಿಸಬಹುದು. ಆದ್ದರಿಂದ ನಮ್ಮಲ್ಲಿರುವ ಎಲ್ಲ ವೈಮನಸ್ಸುಗಳನ್ನು ತೊರೆದು ಸಂಘಟನೆಯನ್ನು ಬಲಿಷ್ಠಗೊಳಿಸುವ ಕೆಲಸ ಮಾಡಬೇಕು. ವೀರಶೈವ ಜನಾಂಗ ಸಂಸ್ಕಾರಕ್ಕೆ ಹೆಸರಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಂಸ್ಕಾರದ ಕೊರತೆ ನಮ್ಮನ್ನು ಕಾಡುತ್ತಿದೆ. ಸಂಸ್ಕಾರ ಕಡಿಮೆಯಾದಾಗ ಧರ್ಮಪ್ರಜ್ಞೆಯ ಕೊರತೆ ಕಾಡಲಿದೆ. ಆದ್ದರಿಂದ ಕನಿಷ್ಠ ಮಠಮಾನ್ಯಗಳಿಗೆ ನಡೆದುಕೊಳ್ಳುವುದನ್ನು ಕಲಿಸಬೇಕಿದೆ ಎಂದರು.
ಕಾರ್ಯಕಾರಣಿ ಸದಸ್ಯ ಸಿದ್ದೇಶ್‌ನಾಗೇಂದ್ರ ಮಾತನಾಡಿದರು.
ಎಸ್‌ಎಸ್‌ಎಲ್‌ಸಿಯಲ್ಲಿ ಶೇ.95 ಹಾಗೂ ಪಿಯುಸಿಯಲ್ಲಿ ಶೇ.90 ಅಂಕ ಪಡೆದ ನಾಲ್ಕುನೂರು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಆರ್.ಗುರುದೇವ್, ಸಕಲೇಶಪುರ ತಾಲೂಕು ಅಧ್ಯಕ್ಷ ಯತೀಶ್ ಬಾಳಗೋಡು, ಅರಸೀಕೆರೆ ತಾಲೂಕು ಅಧ್ಯಕ್ಷ ಗುರುಸಿದ್ದೇಶ್, ಬೇಲೂರು ತಾಲೂಕು ಅಧ್ಯಕ್ಷ ರವಿಕುಮಾರ್, ಹಾಸನ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಅರಕಲಗೂಡು ತಾಲೂಕು ರವಿಕುಮಾರ್, ಆಲೂರು ತಾಲೂಕು ಅಧ್ಯಕ್ಷ ಜಯರಾಜ್, ಚನ್ನರಾಯಪಟ್ಟಣ ಅಧ್ಯಕ್ಷ ಪರಮೇಶ್, ಹೊಳೆನರಸೀಪುರ ತಾಲೂಕು ಅಧ್ಯಕ್ಷ ದೇವರಾಜ್ ಮತ್ತಿತರರಿದ್ದರು.