

ಸಿಂಧನೂರು: ಸದಸ್ಯತ್ವ ನೋಂದಣಿ ಜತೆಗೆ ಮುಂದಿನ ದಿನಗಳಲ್ಲಿ ವೀರಶೈವ ಲಿಂಗಾಯತ ಸಮುದಾಯದ ಜನಗಣತಿ ನಡೆಯಬೇಕು. ಇದರಿಂದ ಬಡತನದಲ್ಲಿರುವವರನ್ನು ಗುರುತಿಸಿ ಮೇಲೆತ್ತುವ ಪ್ರಯತ್ನ ಸರ್ಕಾರ, ಸಮಾಜದಿಂದ ನಡೆಸಬಹುದಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಶ್ರೀ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಲಿಂಗಾಯತ ಸಮಾಜದಿಂದ ಆಯೋಜಿಸಿದ್ದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು. ವೀರಶೈವ ಸಮಾಜ ದೊಡ್ಡದಾಗಿದ್ದು, ಇದನ್ನು ಒಗ್ಗೂಡಿಸುವ ಮಹತ್ತರ ಕೆಲಸ ನಡೆಯಬೇಕಿದೆ. ಈಗಾಗಲೇ ಸಭೆಗಳನ್ನು ನಡೆಸಿ ರೂಪುರೇಷ ಹಾಕಿಕೊಳ್ಳಲಾಗಿದ್ದು, ಎಪಿಎಂಸಿ ಮಾಜಿ ಅಧ್ಯಕ್ಷ ರಾಜಶೇಖರ ಪಾಟೀಲ್, ಸಮಾಜದ ತಾಲೂಕು ಅಧ್ಯಕ್ಷ ಪಂಪನಗೌಡ ತಾವರಗೇರಾ ನೇತೃತ್ವದಲ್ಲಿ ಸದಸ್ಯತ್ವ ಅಭಿಯಾನ ನಡೆಯಲಿದೆ ಎಂದರು.
ಸಾವಿರಾರು ವರ್ಷಗಳ ಇತಿಹಾಸ ಇರುವ ಸಮಾಜಕ್ಕೆ ಮಠ, ಮಾನ್ಯಗಳ ಕೊಡುಗೆ ಅಪಾರವಾಗಿದೆ. ಎಲ್ಲ ಸಮುದಾಯದ ಜನರ ಜತೆಗೆ ಪ್ರೀತಿ, ವಿಶ್ವಾಸ ಗಳಿಸುವಲ್ಲಿ ಕೂಡ ಸಮಾಜ ಮುನ್ನಡೆ ಸಾಧಿಸಿದೆ. ಸಮುದಾಯದವರು ರಾಜಕೀಯವಾಗಿ ಸಿಎಂ ಸೇರಿ ಇತರ ಹುದ್ದೆಗಳನ್ನು ಪಡೆದಿದ್ದೇವೆ. ಸಮಾಜ ಇನ್ನಷ್ಟು ಬಲ ಪಡೆಯಬೇಕಾದರೆ ಸಂಘಟನೆ ಬಲಗೊಳ್ಳಬೇಕು ಎಂದು ತಿಳಿಸಿದರು.
ಈ ಹಿಂದೆ ನಗರಕ್ಕೆ ಸೀಮಿತವಾಗಿದ್ದ ಸಮಾಜ ತಾಲೂಕಿನಾದ್ಯಂತ ಬಲಗೊಳ್ಳಬೇಕು. ಈ ನಿಟ್ಟಿನಲ್ಲಿ ಸದಸ್ಯತ್ವ ಸಂಖ್ಯೆ ಹೆಚ್ಚಾಗಬೇಕು. ಸಮಾಜದ ಪ್ರತ್ಯೇಕ ಕಚೇರಿ ತೆರೆದು ಸಮುದಾಯದ ಜನರಿಗೆ ಸದಾ ಸ್ಪಂದಿಸಬೇಕು. ವೀರಶೈವ ಸಮಾಜದ ಕಲ್ಯಾಣ ಮಂಟಪಕ್ಕೆ 4.60 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಸರ್ಕಾರದಿಂದ ಇನ್ನಷ್ಟು ಅನುದಾನ ಕಲ್ಪಿಸಲಾಗುವುದು. ಸಮಾಜ ಸಂಕುಚಿತ ಮನೋಭಾವ ಬಿಟ್ಟು, ಒಂದೇ ಎನ್ನುವ ಭಾವನೆ ಬೆಳೆಸಿಕೊಳ್ಳಬೇಕೆಂದು ಶಾಸಕ ಬಾದರ್ಲಿ ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ರಂಭಾಪುರಿ ಖಾಸಾ ಶಾಖಾಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಮಾಜದ ಜನರ ಭಾವನೆಗಳು ಮೃದುವಾಗಿದ್ದು, ಎಲ್ಲ ಸಮುದಾಯದವರನ್ನು ಜತೆಗೆ ಕರೆದೊಯ್ಯುವ ಶಕ್ತಿ ಹೊಂದಿದೆ. ಪಂಗಡಗಳನ್ನು ಮಾಡಿಕೊಂಡಿದ್ದರಿಂದ ಸ್ವಲ್ಪ ಮಟ್ಟಿಗೆ ಹಿನ್ನಡೆ ಅನುಭವಿಸುತ್ತಿದೆ. ಎಲ್ಲರೂ ಒಗ್ಗೂಡುವ ಕೆಲಸವಾಗಬೇಕೆಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ ಮಾತನಾಡಿ, ಈಗಿರುವ ಸದಸ್ಯತ್ವ ಶುಲ್ಕ ಕಡಿಮೆ ಮಾಡಿದರೆ, ಎಲ್ಲರೂ ಸದಸ್ಯತ್ವ ಹೊಂದಲು ಸಾಧ್ಯವಾಗಲಿದೆ ಎಂದರು.
ಶ್ರೀ ಚಂದ್ರಮೌಳೇಶ್ವರ ಟ್ರಸ್ಟ್ ಅಧ್ಯಕ್ಷ ಎನ್.ರಾಮನಗೌಡ, ಬಂಗಾರಿಕ್ಯಾಂಪ್ ಸದಾನಂದ ಶರಣರು, ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಸ್ವಾಮೀಜಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಸಮಾಜದ ತಾಲೂಕು ಅಧ್ಯಕ್ಷ ಪಂಪನಗೌಡ ತಾವರಗೇರಾ, ಅಮರಯ್ಯಸ್ವಾಮಿ ಅಲಬನೂರು, ವೀರೇಂದ್ರಪ್ರಸಾದ, ನಿವೃತ್ತ ಶಿಕ್ಷಕ ವೆಂಕನಗೌಡ ವಟಗಲ್ ಇತರರಿದ್ದರು.