

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಬಸವ ಸಂಸ್ಕೃತಿ ಯಾತ್ರೆಯ ಹೆಸರಿನಲ್ಲಿ ಕೆಲವರು ವೀರಶೈವ-ಲಿಂಗಾಯತ ಸಮಾಜ ಬೇರೆ ಬೇರೆ ಎಂದು ಬಿಂಬಿಸಲು ಹೊರಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ಉಂಟಾಗಿರುವ ಗೊಂದಲ ನಿವಾರಿಸುವ ಹಾಗೂ ವೀರಶೈವ-ಲಿಂಗಾಯತ ಒಂದೇ ಎಂದು ಸಾರುವ ಧ್ಯೇಯದೊಂದಿಗೆ ಹುಬ್ಬಳ್ಳಿಯಲ್ಲಿ ಸೆ. 19ರಂದು ವೀರಶೈವ ಲಿಂಗಾಯತ ಏಕತಾ ಸಮಾವೇಶ ಆಯೋಜಿಸಲಾಗಿದೆ ಎಂದು ಶಿರಹಟ್ಟಿ ಶ್ರೀ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತ್ಯೇಕ ಲಿಂಗಾಯತ ಧರ್ಮ ಯಾವುದೇ ಕಾರಣಕ್ಕೂ ಆಗಬಾರದು. ವೀರಶೈವ-ಲಿಂಗಾಯತ ಸಮಾಜ ಒಂದೇ ಎಂಬುದು ನಮ್ಮ ನಿಲುವಾಗಿದೆ. 1904ರಲ್ಲಿ ಸ್ಥಾಪನೆಯಾದ ಅಖಿಲ ಭಾರತ ಲಿಂಗಾಯತ-ವೀರಶೈವ ಮಹಾಸಭಾದ ನಿಲುವು ಸಹ ಇದೇ ಆಗಿದೆ. ಈ ನಿಲುವಿಗೆ ಬದ್ಧರಾಗಿರುವ ರಾಜ್ಯದ ನೂರಾರು ವೀರಶೈವ ಲಿಂಗಾಯತ ಮಠಾಧೀಶರು ಸಮಾವೇಶದಲ್ಲಿ ಪಾಲ್ಗೊಳ್ಳುವರು. ಮಹಾಸಭಾದ ಪದಾಧಿಕಾರಿಗಳು, ಸಮಾಜದ ಸಚಿವರು, ಶಾಸಕರು, ಮಾಜಿ ಜನಪ್ರತಿನಿಧಿಗಳು, ನಿವೃತ್ತ ಅಧಿಕಾರಿಗಳನ್ನು ಆಹ್ವಾನಿಸಲಿದ್ದೇವೆ ಎಂದರು.
ಕೆಲವರು ವೀರಶೈವ-ಲಿಂಗಾಯತ ಬೇರೆ ಬೇರೆ ಎಂದು ಬಿಂಬಿಸುವ ಮೂಲಕ ಸಮಾಜವನ್ನು ಇಬ್ಭಾಗ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬದಾಮಿ ಶಿವಯೋಗ ಮಂದಿರದಲ್ಲಿ ಶುಕ್ರವಾರ (ಸೆ.5) ಒಂದೇ ನಿಲುವಿನ 200 ಮಠಾಧೀಶರು ಸಭೆ ಸೇರಿ ಸಮಾವೇಶ ನಡೆಸುವ ನಿರ್ಧಾರಕ್ಕೆ ಬಂದಿದ್ದೇವೆ. ಸಮಾವೇಶದ ಸಮಯ (ಬೆಳಗ್ಗೆ 10 ಅಥವಾ ಮಧ್ಯಾಹ್ನ 3ಕ್ಕೆ)ವನ್ನು ಕೆಲ ದಿನಗಳಲ್ಲಿ ನಿರ್ಧರಿಸಲಿದ್ದೇವೆ ಎಂದು ಹೇಳಿದರು.
ಸಮಾವೇಶದಲ್ಲಿ ಗೊತ್ತಾಗಲಿದೆ
ವೀರಶೈವ ಲಿಂಗಾಯತ ಸಮಾಜವು ತತ್ವ ಪ್ರಧಾನವಾದದ್ದು, ವ್ಯಕ್ತಿ ಪ್ರಧಾನವಲ್ಲ. ಈ ವಿಚಾರಕ್ಕೆ ಬದ್ಧರಾಗಿರುವವರು ಎಲ್ಲರೂ ಸಮಾವೇಶಕ್ಕೆ ಬರುತ್ತಾರೆ. ಸಮಾವೇಶಕ್ಕೆ ಬನ್ನಿ ಎಂದು ನಾವು ಯಾರನ್ನು ಪ್ರತ್ಯೇಕವಾಗಿ ಆಹ್ವಾನಿಸುವುದಿಲ್ಲ. ಆಮಂತ್ರಣ ಪತ್ರಿಕೆಯನ್ನು ಮುದ್ರಿಸುವುದಿಲ್ಲ. ವೀರಶೈವ-ಲಿಂಗಾಯತ ಒಂದೇ ಎಂಬ ವಿಚಾರದಲ್ಲಿ ಪಂಚಪೀಠಗಳಲ್ಲಿ ಯಾವುದೇ ಭಿನ್ನಭಿಪ್ರಾಯವಿಲ್ಲ. ಯಾರ ನಿಲುವು ಏನು ಎಂಬುದು ಸೆ. 19ರಂದು ಗೊತ್ತಾಗಲಿದೆ ಎಂದರು.
2017-18ರಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ಹೋರಾಟವನ್ನು ನಾವು ಖಂಡಿಸಿದ್ದೇವು. ಈಗ ಬಸವ ಸಂಸ್ಕೃತಿ ಯಾತ್ರೆ ಕೈಗೊಂಡಿರುವವರು ಹಿಂದೆ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆ ಹೋರಾಟದಲ್ಲಿ ಇದ್ದವರೇ ಆಗಿದ್ದಾರೆ. ಈಗ ಅವರು ಬಸವ ಧರ್ಮ ಸ್ಥಾಪನೆ ಎಂದು ಹೇಳುತ್ತಿದ್ದಾರೆ. ಈ ತಂಡದಲ್ಲಿರುವ ನಿವೃತ್ತ ಐಎಎಸ್, ಕೆಎಎಸ್ ಅಧಿಕಾರಿಗಳು, ಬುದ್ಧಿಜೀವಿಗಳು, ಸಾಹಿತಿಗಳು ತಮ್ಮದು ಬಸವ ಸಂಸ್ಕೃತಿ. ಮಠ ಸಂಸ್ಕೃತಿ ಅಲ್ಲ ಎಂದು ಹೇಳುತ್ತಿದ್ದಾರೆ. ಇವರೊಂದಿಗೆ ವೇದಿಕೆ ಹಂಚಿಕೊಂಡಿರುವವರು ಮಠಾಧಿಪತಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಸವಣ್ಣನವರು ಹೇಗೆ ಮಠಾಧಿಪತಿಗಳು ಆಗಿರಲಿಲ್ಲವೋ ಇವರು ಹಾಗೇ ಇರಬೇಕೆಂದು ತಿಳಿಸಲು ಬಯಸುತ್ತೇವೆ ಎಂದು ಹೇಳಿದರು.