

ಮೈಸೂರು: ಕಲ್ಯಾಣದಲ್ಲಿ ಕ್ರಾಂತಿಯಾಗದಿದ್ದರೆ ಪ್ರಸ್ತುತ ಬಸವ ಧರ್ಮ, ಬಸವ ತತ್ವ ಭಾರತೀಯ ಧರ್ಮವಾಗಿ ವಿಶ್ವ ವ್ಯಾಪಿ ಹರಡುತ್ತಿತ್ತು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅಭಿಪ್ರಾಯಪಟ್ಟರು.
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ, ವೀರಶೈವ-ಲಿಂಗಾಯತ ಸಂಘಸಂಸ್ಥೆಗಳು ಮತ್ತು ಬಸವ ಬಳಗಗಳ ಒಕ್ಕೂಟದಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಯಕ ಮಾಡುತ್ತಿದ್ದ ಸಣ್ಣ, ಸಣ್ಣ ಸಮುದಾಯಗಳನ್ನು ಒಂದುಗೂಡಿಸಿ, ಅವರೆಲ್ಲರಲ್ಲೂ ವೈಚಾರಿಕತೆ ಬೆಳೆಸಿ ಸಮ ಸಮಾಜ ನಿರ್ಮಾಣದ ಸುಂದರ ಕನಸು ಕಂಡಿದ್ದವರು ಬಸವಣ್ಣನವರು. ಕಲ್ಯಾಣ ಕ್ರಾಂತಿಯಿಂದಾಗಿ ಅವರ ಕನಸು ನನಸಾಗದೇ ಹೋದದ್ದು ನಮ್ಮ ದೌರ್ಭಾಗ್ಯ ಎಂದು ಬೇಸರ ವ್ಯಕ್ತಪಡಿಸಿದರು.
ಒಂದು ವೇಳೆ ಕಲ್ಯಾಣದಲ್ಲಿ ಕ್ರಾಂತಿ ಆಗದಿದ್ದರೆ ಬಸವ ಧರ್ಮ ಎಲ್ಲೆಡೆಪಸರಿಸಿ ಬಸವ ಧರ್ಮ ಭಾರತದ ಧರ್ಮವಾಗುತ್ತಿತ್ತು. 12ನೇ ಶತಮಾನದಲ್ಲೇ ಅನುಭವ ಮಂಟಪವನ್ನು ಸ್ಥಾಪನೆ ಮಾಡಿ, ಸಾಮಾಜಿಕ ಅನಿಷ್ಠ, ಮೌಢ್ಯ ವಿರುದ್ಧ, ಜಾತಿ ವ್ಯವಸ್ಥೆೆಯ ವಿರುದ್ಧ ಚಳವಳಿ ಹುಟ್ಟುಹಾಕಿದ ಬಸವಣ್ಣ, ಮಹಿಳೆಯರಿಗೆ ಸಮಾನತೆ ಹಾಗೂ ಶಿಕ್ಷಣ ಅವಶ್ಯ ಎಂದು ಪ್ರತಿಪಾದಿಸಿದ್ದರು. ಆಡು ಭಾಷೆಯಲ್ಲಿ ವಚನಗಳನ್ನು ಬರೆದು ಚಳವಳಿಗಳ ಮೂಲಕ ಸಮಾಜ ಸುಧಾರಣೆಗೆ ಮುಂದಾದರು. ಅಂದು ಸ್ಥಾಪನೆಯಾದ ಅನುಭವ ಮಂಟಪವೇ ನಮ್ಮ ಸಂಸತ್ತು ರೂಪುಗೊಳ್ಳಲು ಪ್ರೇರಣೆಯಾಗಿದೆ ಎಂದು ವಿಶ್ಲೇಷಿಸಿದರು.
ಪಂಗಡಗಳು ಒಂದುಗೂಡಬೇಕು:
ವೀರಶೈವ-ಲಿಂಗಾಯತ ಸಮುದಾಯದ ಉಪ ಪಂಗಡಗಳೇ ಒಂದಾಗದೆ ಚೆಲ್ಲಾಪಿಲ್ಲಿಯಾಗಿ ಹೋಗಿವೆ. ಸಾಮಾಜಿಕ, ಶೈಕ್ಷಣಿಕವಾಗಿ ಬೆಳೆಯಲು ಎಲ್ಲರೂ ಒಗ್ಗೂಡುವ ಅವಶ್ಯಕತೆ ಇದೆ. ನಾವೆಲ್ಲರೂ ಬಸವಣ್ಣ ಅಂತರ್ಜಾತಿ ವಿವಾಹ ಮಾಡಿದ ಬಗ್ಗೆೆ ಮಾತನಾಡುತ್ತೇವೆ. ಆದರೆ ನಮ್ಮ ಒಳ ಪಂಗಡಗಳಲ್ಲಿ ವಿವಾಹ ಮಾಡಿಕೊಳ್ಳಲು ಒಪ್ಪುದಿಲ್ಲ. ಒಬ್ಬರನ್ನು ನೋಡಿದರೆ ಒಬ್ಬರು ಅಗೌರವ ತೋರುತ್ತಾರೆ. ಈ ಧೋರಣೆಯನ್ನು ಬಿಟ್ಟು ಎಲ್ಲರೂ ಒಂದಾಗಬೇಕು ಎಂದು ಹೇಳಿದರು.
ಸಮುದಾಯದಲ್ಲಿ ಉತ್ತರ-ದಕ್ಷಿಣ ಎನ್ನುವ ಭಾವನೆ ಇದೆ. ಈ ಭಾವನೆಯನ್ನು ಹೋಗಲಾಡಿಸಲು ಎರಡೂ ಭಾಗದವರ ಕೂಡುವಿಕೆ ಆಗಬೇಕು. ಬಸವಾದಿ ಶರಣರ ಸಿದ್ಧಾಂತದಲ್ಲಿ ನಮ್ಮ ಸಮಾಜವನ್ನು ಸಂಘಟನೆ ಮಾಡಿಕೊಳ್ಳಬೇಕು. ಇತರೆ ಧರ್ಮದವರನ್ನೂ ಗೌರವಿಸಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಬಸವ ಜಯಂತಿ ಎಂದರೆ ಜಾತಿ ವಿನಾಶದ, ಮಾನವ ಹಕ್ಕುಗಳ ಸಂರಕ್ಷಣೆಯ, ಮೂಢನಂಬಿಕೆ, ಸನಾತನವಾದ, ಶೋಷಣೆಯ ವಿರುದ್ಧದ ಹೋರಾಟದ ವೈಜ್ಞಾನಿಕ-ವೈಚಾರಿಕ ಜಯಂತಿ ಎಂದು ಅರ್ಥ. ಜಾತಿ ಶ್ರೇಷ್ಠತೆಯನ್ನು ಒಡೆದು ಹಾಕಲು ಬಸವಣ್ಣ ನಾನು ಮಾದರ ಚನ್ನಯ್ಯನ ಮಗ ಎಂದು ಹೇಳಿಕೊಂಡಿದ್ದಾರೆ. ಆದ್ದರಿಂದ ಬಸವಣ್ಣ ಜೀವಂತವಾಗಿರಬೇಕಾದರೆ ಪ್ರತಿಯೊಬ್ಬ ಭಾರತೀಯನೂ ಬಸವಣ್ಣನ ಅನುಯಾಯಿಯಾಗಬೇಕು ಎಂದರು.
ಜಾತಿಯ ಶ್ರೇಷ್ಠತೆ ಅಳಿಯದೇ ಜಾತಿ ವಿನಾಶ ಆಗುವುದಿಲ್ಲ. ಜಾತಿ ನಾಶವಾಗದೇ ಮಾನವೀಯತೆ ಬರುವುದಿಲ್ಲ. ಸಮುದಾಯಗಳ ನಡವಳಿಕೆಗಳಿಗೆ ಮನುಷ್ಯರ ಮನಸ್ಸು ಕಾರಣ. ಈ ಹಿನ್ನೆೆಲೆಯಲ್ಲಿ 12ನೇ ಶತಮಾನದಲ್ಲೇ ಸಮ ಸಮಾಜವನ್ನು ನಿರ್ಮಾಣ ಮಾಡಲು ಹೊರಟಿದ್ದ ಬಸವಣ್ಣ ಮಹಾನ್ ಸಾಂಸ್ಕೃತಿಕ ನಾಯಕ. ಅವರ ವಿಚಾರಧಾರೆಗಳನ್ನು ಸ್ಮರಣೆ ಮಾಡುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ರಾಜಕಾರಣಿಗಳು ಸಮುದಾಯ ಸೇವೆಗೆ ಬೇಡ:
ನೈಸ್ ಸಂಸ್ಥೆ ಅಧ್ಯಕ್ಷ ಅಶೋಕ್ ಖೇಣಿ ಮಾತನಾಡಿ, ಸಮುದಾಯದ ಸೇವೆ ಮಾಡುವವರು ರಾಜಕೀಯ ಕ್ಷೇತ್ರವನ್ನು ಬಿಡಬೇಕು. ರಾಜಕೀಯ ಮಾಡುವವರು ಸಮುದಾಯದ ಸೇವೆಗೆ ಬರಬಾರದು ಎಂದು ಹೇಳಿದರು.
ವೀರಶೈವ-ಲಿಂಗಾಯಿತ ಮಹಾಸಭಾದಲ್ಲಿಯೂ ಈಗ ಪಕ್ಷ ರಾಜಕೀಯ ನುಸುಳಿದೆ. ಸಮುದಾಯದ ಸೇವೆ ಮಾಡಲು ಇದು ತೊಡಕಾಗಿದ್ದು, ಜಗಳವೇ ನಡೆಯುತ್ತಿದೆ. ಹಾಗಾಗಿ ಸಮುದಾಯ ಸೇವೆ ಹಾಗೂ ಪಕ್ಷ ರಾಜಕೀಯ ಬೇರೆ, ಬೇರೆಯಾಗಿ ಮಾಡಬೇಕು ಎಂದರು.
ಬಸವಣ್ಣನವರಿಗೆ ಬಿಜ್ಜಳ ರಾಜನು, ನೀವು ಸಾಮಾಜಿಕ ಕೆಲಸ ಮಾಡಿ, ಇಲ್ಲ ರಾಜಕೀಯ ಕೆಲಸ ಮಾಡಿ, ಎರಡನ್ನೂ ಒಟ್ಟಿಗೆ ಮಾಡಬೇಡಿ ಎಂದು ಹೇಳಿದಾಗ, ನನಗೆ ಸಮಾಜ ಸುಧಾರಣೆಯೇ ಮುಖ್ಯ ಎಂದು ಬಸವಣ್ಣ ರಾಜಕೀಯವನ್ನು ತ್ಯಜಿಸಿದ್ದರು. ಅದೇ ರೀತಿ ನಮ್ಮ ಸಮುದಾಯದವರು ಮಹಾಸಭಾದ ಕೆಲಸ ಮಾಡಲು ರಾಜಕೀಯವನ್ನು ತ್ಯಜಿಸಬೇಕು. ಇಲ್ಲದಿದ್ದರೆ ನಮ್ಮ ಸಮುದಾಯದ ಅಭಿವೃದ್ಧಿಗೆ ನಷ್ಟ ಉಂಟಾಗುತ್ತದೆ. ಸಮಾಜ ವಿಘಟನೆಯಾಗುತ್ತದೆ ಎಂದು ಎಚ್ಚರಿಸಿದರು.
ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ದೇವರನ್ನು ಪೂಜೆ ಮಾಡುವುದು ಒಂದು ವರ್ಗಕ್ಕೆೆ ಮಾತ್ರ ಸೀಮಿತವಾಗಿದ್ದ ಕಾಲದಲ್ಲಿ, ಗರ್ಭಗುಡಿಯಲ್ಲಿದ್ದ ದೇವರನ್ನು ಸಾಮಾನ್ಯರ ಅಂಗೈಗೆ ತಂದು ಕೊಟ್ಟವರು ಬಸವಣ್ಣ. ದೇವಾಲಯದ ಒಳಗೆ ಎಲ್ಲರಿಗೂ ಪ್ರವೇಶವಿಲ್ಲದ ಸಮಯದಲ್ಲಿ ದೇವರನ್ನು ಪೂಜಿಸಲು ಮಧ್ಯದಲ್ಲಿ ಯಾರೂ ಬೇಡ ಎಂದು ಜನರಿಗೆ ಲಿಂಗವನ್ನು ಕೊಟ್ಟು ಪೂಜಿಸುವಂತೆ ಹೇಳಿದರು ಎಂದು ಬಣ್ಣಿಸಿದರು.
ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಚಿವ ಕೆ.ವೆಂಕಟೇಶ್, ಕೆಯುಡಬ್ಲೂಎಸ್‌ಎಸ್‌ಬಿ ಅಧ್ಯಕ್ಷ ವಿನಯ ಕುಲಕರ್ಣಿ, ಶಾಸಕ ಗಣೇಶ್ ಪ್ರಸಾದ್, ವಿಧಾನ ಪರಿಷತ್ತಿನ ಸದಸ್ಯ ಡಾ.ಡಿ.ತಿಮ್ಮಯ್ಯ, ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಎಂ.ಪ್ರದೀಪ್‌ಕುಮಾರ್, ಮುಡಾ ಅಧ್ಯಕ್ಷ ಕೆ.ಮರೀಗೌಡ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಚಿತ್ರನಟ ಎನ್.ಎಸ್.ನಾಗಭೂಷಣ್, ವಿವಿಧ ಮಠಾಧೀಶರು, ಬಸವ ಬಳಗಗಳ ಒಕ್ಕೂಟದ ಪದಾಧಿಕಾರಿಗಳು ಇದ್ದರು.