ವೀರಶೈವ ಲಿಂಗಾಯತ ಒಳಪಂಗಡಗಳು ಒಂದಾಗಬೇಕು : ಬಿ.ಮುಕ್ತಾಂಬ

Veerashaiva Lingayat
Published on

ಮೈಸೂರು: ವೀರಶೈವ ಲಿಂಗಾಯತರು ಒಳಪಂಗಡವನ್ನು ಮರೆತು ನಾವೆಲ್ಲರು ಒಂದೇ ಭಾವನೆಯೊಂದಿಗೆ ಒಗ್ಗೂಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಬಿ.ಮುಕ್ತಾಂಬ ಕರೆ ನೀಡಿದರು.

ನಗರದ ಎಂಜಿ ರಸ್ತೆಯ ರಾಜೇಂದ್ರ ಭವನದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಪದಗ್ರಹಣ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವೀರಶೈವ ಲಿಂಗಾಯತರು ಪಂಗಡಗಳಾಗಿ ಹರಿದು ಹಂಚಿ ಹೋಗುತ್ತಿದ್ದಾರೆ. ಈ ವಿಚಾರದಲ್ಲಿ ನಾವು ಜಾಗೃತರಾಗಬೇಕಾಗಿದೆ. ನಮ್ಮದು ಪ್ರಬಲ ಸಮಾಜ ಎಂದು ಇಲ್ಲಿಯವರೆಗೆ ಪರಿಣಿಸಲಾಗುತಿತ್ತು. ಆದರೆ, ಒಳಪಂಗಡಗಳಾಗಿ ಹರಿದು ಹಂಚಿ ಹೋದ ಪರಿಣಾಮ ನಾವು ರಾಜಕೀಯದಲ್ಲಿ ಉನ್ನತ ಹುದ್ದೆ, ಉತ್ತಮ ಸಚಿವ ಸ್ಥಾನ ಪಡೆಯಲು ಹೋರಾಟ ಮಾಡುವ ಸ್ಥಿತಿಗೆ ಬಂದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಸಮಾಜದಲ್ಲಿ ಸಾಕಷ್ಟು ಬಡವರು ಇದ್ದಾರೆ. ಬಡವರನ್ನು ಗುರುತಿಸಿ ಅವರನ್ನು ಆರ್ಥಿಕವಾಗಿ ಮುಂದೆ ತರುವ ಕಾರ್ಯ ಮಾಡಬೇಕು. ಬಡ ಮಕ್ಕಳನ್ನು ಗುರುತಿಸಿ ಅವರಿಗೆ ಉತ್ತಮ ಶಿಕ್ಷಣ ನೀಡಬೇಕು. ಇಂತಹ ಚಟುವಟಿಕೆಯಿಂದ ನಾವು ಪ್ರಬಲ ಸಮಾಜವನ್ನು ನಿರ್ಮಿಸಬಹುದು ಎಂದು ಅಭಿಪ್ರಾಯಪಟ್ಟರು.

ಹೆಣ್ಣೆಂದರೆ ಅಂದೊಂದು ಶಕ್ತಿ, ಯುಕ್ತಿ ಹಾಗೂ ದೈವೀಕ ಶಕ್ತಿ. ಪ್ರತಿಯೊಂದು ಹೆಜ್ಜೆಯಲ್ಲೂ ಹೆಣ್ಣು ಪ್ರಬಲವಾಗಿ ಕಾಲಿಟ್ಟಾಗ ಮಾತ್ರ ಸಮಾಜದಲ್ಲಿ, ಸಂಸಾರದಲ್ಲಿ ಬದಲಾವಣೆ ಕಾಣಲು ಸಾಧ್ಯ. ದೇಶದ ಆರ್ಥಿಕ ಚುಕ್ಕಾಣಿ ಹಿಡಿದಿರುವುದು ಹೆಣ್ಣು ಎಂಬುದು ಹೆಮ್ಮೆಯ ವಿಚಾರ ಎಂದರು.

ಅಂತಾರಾಷ್ಟ್ರೀಯ ಖೋ ಖೋ ಆಟಗಾರ್ತಿ ಚೈತ್ರಾ ಮಾತನಾಡಿ, ‘ನಿನ್ನ ಕೈಯಲ್ಲಿ ಆಗೋದಿಲ್ಲ’ ಎಂದು ಮಹಿಳೆಯರಿಗೆ ಸಮಾಜ ಸಾಮಾನ್ಯವಾಗಿ ಹೇಳುತ್ತದೆ. ಆದರೆ, ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ತನ್ನ ಸಾಧನೆ ತೋರಲು ಸಮರ್ಥರಿದ್ದು, ಅದನ್ನು ಮಹಿಳೆಯರು ಸಾಧಿಸಿ ತೋರಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ವಿ. ಬಸವರಾಜು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಧನ್ಯಾ ಸತ್ಯೇಂದ್ರಮೂರ್ತಿ, ರಾಜ್ಯ ಕಾರ್ಯದರ್ಶಿ ಕವಿತಾ, ಸಮಾಜ ಸೇವಕಿ ಸುಧಾ ಮೃತ್ಯುಂಜಯಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net