

ಬ್ಯಾಡಗಿ: ರಾಜ್ಯದಲ್ಲಿ ವೀರಶೈವ ಲಿಂಗಾಯತರ ಸಂಖ್ಯೆ ಅಧಿಕವಾಗಿದ್ದರೂ ಸಂಘಟನೆ ಹಾಗೂ ಸ್ವಾಭಿಮಾನದ ಕೊರತೆಯಿಂದ ಸಮಾಜ ಹೀನಾಯ ಸ್ಥಿತಿ ತಲುಪಿದೆ. ರಾಜ್ಯಮಟ್ಟದಲ್ಲಿ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನೂತನ ಅಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ ತಿಳಿಸಿದರು.
ಪಟ್ಟಣದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ನೂತನ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದ ವಿವಿಧೆಡೆ ವೀರಶೈವ ಲಿಂಗಾಯತ ಮಠಗಳು, ಶಿಕ್ಷಣ ಸಂಸ್ಥೆಗಳು ಬಹುತೇಕ ಜನರಿಗೆ ಅನ್ನ, ಶಿಕ್ಷಣ, ಉದ್ಯೋಗ ನೀಡುವ ಮೂಲಕ ಉದಾರತೆ ತೋರುತ್ತಿವೆ. ಲಿಂ. ಹಾನಗಲ್ಲ ಕುಮಾರೇಶ್ವರ ಶ್ರೀಗಳು 1903ರಲ್ಲಿ ಸ್ಥಾಪಿಸಿದ ಅಖಿಲ ಭಾರತ ವೀರಶೈವ ಮಹಾಸಭೆ ರಚನೆಯಾದ ಬಳಿಕ, ತುಮಕೂರಿನ ಸಿದ್ಧಗಂಗಾಮಠ, ಚಿತ್ರದುರ್ಗದ ಮುರುಘರಾಜೇಂದ್ರ ಮಠ, ಮೈಸೂರಿನ ಸುತ್ತೂರ ಮಠ, ಸಿರಿಗೆರೆಯ ತರಳಬಾಳು ಮಠ, ಬಾಳೆಹೊನ್ನೂರಿನ ರಂಭಾಪುರಿ ಪೀಠ, ಶಾಮನೂರ ಶಿವಶಂಕರಪ್ಪ ಅವರ ಬಾಪೂಜಿ ಸೇರಿ ಸಾವಿರಾರು ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿವೆ. ಆದರೆ, ನಮ್ಮಲ್ಲಿರುವ ಅಭಿಮಾನದ ಶೂನ್ಯತೆಯಿಂದ ರಾಜ್ಯದಲ್ಲಿ 3 ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿರುವ ವೀರಶೈವ ಲಿಂಗಾಯತ ಸಮಾಜ ಅಲ್ಪ ಸಂಖ್ಯಾತರಂತೆ ಭಾಸವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಶಾಸಕ ಸುರೇಶಗೌಡ ಪಾಟೀಲ ಹಾಗೂ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ವೀರಶೈವ ಸಮಾಜದಲ್ಲಿರುವ ಒಳಪಂಗಡ ಇತ್ಯಾದಿಗಳಿಂದ ಭಿನ್ನಾಭಿಪ್ರಾಯ ಹುಟ್ಟಿಕೊಂಡ ಪರಿಣಾಮ ಸಂಘಟನೆಯಲ್ಲಿ ಹಿನ್ನೆಡೆಯಾಗುತ್ತಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸುವ ಮೂಲಕ ಸಮಾಜ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ನೂತನ ತಾಲೂಕಾಧ್ಯಕ್ಷರಾಗಿ ವಿಶ್ವನಾಥ ಅಂಕಲಕೋಟಿ, ಉಪಾಧ್ಯಕ್ಷ ಚಂದ್ರಣ್ಣ ಶೆಟ್ಟರ, ಗೌರವಾಧ್ಯಕ್ಷ ವೀರಭದ್ರಪ್ಪ ಗೊಡಚಿ, ಮಹಿಳಾ ಅಧ್ಯಕ್ಷೆ ಮಹೇಶ್ವರಿ ಪಸಾರದ, ರಮೇಶ ಮೋಟೆಬೆನ್ನೂರು ಕಾರ್ಯದರ್ಶಿ ಸೇರಿ ವಿವಿಧ ಸದಸ್ಯರು ಅಧಿಕಾರ ಸ್ವೀಕರಿಸಿದರು.
ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಡಾ. ಶಿವಯೋಗಿ ದೇವರು, ರಾಚಯ್ಯನವರು ಓದಿಸೋಮಠ, ಎಂ.ಎಸ್. ಕೋರಿಶೆಟ್ಟರ, ಗಂಗಣ್ಣ ಎಲಿ, ಶಂಕರಗೌಡ ಪಾಟೀಲ, ಪ್ರಕಾಶ ಬನ್ನಿಹಟ್ಟಿ, ಪ್ರೇಮಾನಂದ ಲಕ್ಕಣ್ಣನವರ, ವಿ.ವಿ. ಹುಣಸಿಕಟ್ಟಿ, ಮಲ್ಲಿಕಾರ್ಜುನ ಬಳ್ಳಾರಿ, ವಾಮದೇವಪ್ಪ, ಉಮಾ ಮಠದ, ಇತರರಿದ್ದರು. ಶಿಕ್ಷಕ ಎ.ಟಿ. ಪೀಠದ, ಶಂಭು ಮಠದ, ಗಾಯತ್ರಿ ಸಾಲ್ಮನಿ ಕಾರ್ಯಕ್ರಮ ನಿರ್ವಹಿಸಿದರು.