

ಚಿತ್ರದುರ್ಗ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 23ನೇ ಮಹಾ ಅಧಿವೇಶನ ದಾವಣಗೆರೆ ಎಂಬಿಎ ಕಾಲೇಜು ಮೈದಾನದಲ್ಲಿ ಡಿಸೆಂಬರ್ 24ರಿಂದ 3 ದಿನಗಳ ಕಾಲ ನಡೆಯಲಿದೆ ಎಂದು ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೀರಶೈವ ಲಿಂಗಾಯತರೆಲ್ಲರೂ ಒಂದೇ ಎಂದು ಸಾರುವ ಉದ್ದೇಶದೊಂದಿಗೆ ನಡೆಯುತ್ತಿರುವ ಈ ಮಹಾ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗಣ್ಯರು ಸೇರಿ ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದರು.
ರಾಜ್ಯದ ಪ್ರತಿ ಜಿಲ್ಲೆಯಲ್ಲೂ ವೀರಶೈವ ಲಿಂಗಾಯತರನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿದ್ದೇವೆ. ಆಂಧ್ರ, ಕೇರಳ ಮತ್ತು ತಮಿಳು ನಾಡಿನಿಂದಲೂ ಸಮಾಜದ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
ಬೆಂಗಳೂರಲ್ಲಿರುವ ಮಹಾಸಭಾದ 4 ಎಕರೆ ಜಾಗದಲ್ಲಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಿಸಲಾಗುವುದು. ಐಎಎಸ್, ಐಪಿಎಸ್ ಸಹಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಮುರುಘಾ ಮಠದ ಪ್ರಕರಣ ಅತೀ ಸೂಕ್ಷ್ಮವಾಗಿದ್ದು, ಅದರ ಬಗ್ಗೆಯೂ ಮುಂದಿನ ದಿನಗಳಲ್ಲಿ ಚರ್ಚಿಸಲಾಗುವುದು ಎಂದರು.
ಮಹಾಸಭಾದ ದಾವಣೆಗೆರೆ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನೆ ಶಿವಕುಮಾರ್ ಮಾತನಾಡಿ, ಅಧಿವೇಶನದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಉಟ, ವಸತಿ ಕಲ್ಪಿಸಲಾಗಿದೆ.
ಪ್ರತಿನಿಧಿಗಳು 500 ರೂ. ನೋಂದಣಿ ಶುಲ್ಕ ಪಾವತಿಸಬೇಕು. ವೀರಶೈವ ಲಿಂಗಾಯತರನ್ನು ಒಬಿಸಿಗೆ ಸೇರಿಸುವಂತೆ ಬೇಡಿಕೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಕೇಂದ್ರ ಸರ್ಕಾರ ನಮ್ಮ ಒಳಪಂಗಡಗಳಿಗೆ ಮೀಸಲು ನೀಡ ಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ,ಪದಾಧಿಕಾರಿಗಳಾದ ಜಿ.ಎನ್.ಮಹೇಶ್, ಸಂದೀಪ್, ತಿಪ್ಪೇಸ್ವಾಮಿ, ನಿರ್ಮಲಾ ಬಸವರಾಜ್, ರುದ್ರೇಶ್ ಐಗಳ್, ಆನಂದ್, ರಾಜಣ್ಣ, ಬಿ.ಜಿ.ರಮೇಶ್, ಕಾರ್ತಿಕ್, ಆರತಿ ಮಹಡಿ ಶಿವಮೂರ್ತಿ, ಶ್ಯಾಮಲಾ ಶಿವಪ್ರಕಾಶ್ ಇತರರು ಇದ್ದರು.