

ಮೈಸೂರು: ಸಣ್ಣ ಕೈಗಾರಿಕೆಗಳ ಬಲವರ್ಧನೆಗಾಗಿ ಅಂತರ ರಾಷ್ಟ್ರೀಯ ಲಿಂಗಾಯತ ಯೂತ್ ಫೋರಂನಿಂದ ನಗರದಲ್ಲಿ ಮುಂಬರುವ ಜನವರಿಯಲ್ಲಿ ‘ವೀರಶೈವ-ಲಿಂಗಾಯತ ಗ್ಲೋಬಲ್ ಬ್ಯುಸಿನೆಸ್ ಕಾನ್‌ಕ್ಲೇವ್- 2025’ ಆಯೋಜಿಸಲಾಗಿದೆ.
ಲಾಭ ರಹಿತ ಸಾರ್ವಜನಿಕ ಸಾಮಾಜಿಕ ಟ್ರಸ್ಟ್ ಅಗಿರುವ ಅಂತರರಾಷ್ಟ್ರೀಯ ಲಿಂಗಾಯತ ಯೂತ್ ಫೋರಂನಿಂದ (ಐಲೈಫ್) ಈ ಬಾರಿ ಜನವರಿ 17ರಿಂದ 19ರ ವರೆಗೆ ಮೂರು ದಿನಗಳ ಕಾಲ ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯಲಿದೆ ಎಂದು ಸಮಾವೇಶದ ಸಂಚಾಲಕರಾದ ಐಲೈಫ್‌ನ ಸಂಸ್ಥಾಪಕ ಸಂತೋಷ್ ಕೆಂಚಾಂಬ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗುಡಿ ಕೈಗಾರಿಕೆಗಳನ್ನು ಕೇಂದ್ರವಾಗಿಸಿಕೊಂಡು ಸಮಾವೇಶದಲ್ಲಿ ಉದ್ಯಮಿಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. 140ಕ್ಕೂ ಹೆಚ್ಚು ಮಳಿಗೆಗಳಲ್ಲಿ ಗುಡಿ, ಸಣ್ಣ ಹಾಗೂ ಗೃಹ ಕೈಗಾರಿಕೆಗಳ ವಸ್ತುಗಳನ್ನು ಪ್ರದರ್ಶನಗೊಳಿಸಲು ಅವಕಾಶವಿದೆ ಎಂದರು.
ಪ್ರತಿ ವರ್ಷ ಒಂದೊಂದು ಜಿಲ್ಲೆಯಲ್ಲಿ ಈ ಸಮ್ಮೇಳನ ಆಯೋಜಿಸಿಕೊಂಡು ಬರಲಾಗುತ್ತಿದೆ. ಕಳೆದ ಬಾರಿ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಸಮ್ಮೇಳನದಲ್ಲಿ 98 ಕೋಟಿ ರೂ. ವಹಿವಾಟು ನಡೆದಿತ್ತು. ಮೈಸೂರಿನಲ್ಲಿ ಇನ್ನೂ ಹೆಚ್ಚಿನ ವಹಿವಾಟು ನಿರೀಕ್ಷಿಸಲಾಗಿದ್ದು, 10ರಿಂದ 15 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜಿಸಿರುವ ಸಮಾವೇಶದಲ್ಲಿ ದೇಶ ಹಾಗೂ ವಿದೇಶದ ವಿವಿಧ ಭಾಗಗಳಿಂದ ಬರುವ ಹಲವು ವೃತ್ತಿಪರರನ್ನು ಹಾಗೂ ಉದ್ಯಮಿಗಳನ್ನು ಭೇಟಿ ಮಾಡಲು ಸಹಕಾರಿ ಅಗುತ್ತದೆ ಎಂದು ಹೇಳಿದರು.
ಉದ್ಯಮಕ್ಕೆ ಸಂಬಂಧಿಸಿದಂತೆ ವಿವಿಧ ಮಳಿಗೆಗಳು, ಚರ್ಚೆ, ಸಂವಾದ ಸೇರಿದಂತೆ ಕೌಶಲ್ಯ ಬೆಳವಣಿಗೆ ಕುರಿತು ಚರ್ಚೆ, ಇತರ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಅನೇಕ ಉದ್ಯಮಿಗಳು ಮತ್ತು ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದು ಅತ್ಯುತ್ತಮ ವೇದಿಕೆಯೂ ಹೌದು. ಸಮಾವೇಶದಲ್ಲಿ ಮೂರು ದಿನವೂ ಸಂಜೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ವಿವರಿಸಿದರು.
ವೀರಶೈವ-ಲಿಂಗಾಯತ ಸಮುದಾಯದ ಉದ್ಯಮಿಗಳನ್ನು, ವೃತ್ತಿಪರರನ್ನು ಒಂದೇ ವೇದಿಕೆಗೆ ತರುವ ಮತ್ತು ಆರ್ಥಿಕ, ಕೈಗಾರಿಕೆ, ವ್ಯಾಪಾರ ಚಟುವಟಿಕೆಗಳನ್ನು ಉತ್ತಮಗೊಳಿಸುವ ಉದ್ದೇಶವನ್ನು ಈ ಐಲೈಫ್ ಹೊಂದಿದೆ ಎಂದರು.
ಈ ಸಮಾವೇಶವು ಜಾಗತಿಕ ಹಂತದಲ್ಲಿ ಮೈಸೂರಿನ ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿ, ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವುದು, ವ್ಯಾಪಾರ-ವಹಿವಾಟು ಹೆಚ್ಚಾಗುವಂತೆ ಮಾಡುವುದು ಹಾಗೂ ನಗರದ ಒಟ್ಟಾರೆ ಉನ್ನತೀಕರಣ ಈ ಸಮಾವೇಶದ ಮುಖ್ಯ ಉದ್ದೇಶ ಇದೆ ಎಂದರು.
ಐಲೈಫ್‌ನ ಮಾಜಿ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ಮಾತನಾಡಿ, ಹಳ್ಳಿಯಿಂದ ಪಟ್ಟಣಕ್ಕೆ ಬರುವ ಉದ್ಯಮಿಗಳೆಲ್ಲರೂ ಬೃಹತ್ ಹಾಗೂ ಮಧ್ಯಮ ಉದ್ಯಮಗಳ ಮೇಲೆ ಮಾತ್ರ ಗಮನ ಕೊಡುತ್ತಾರೆ. ಅದಕ್ಕೂ ಮೀರಿ ನಮ್ಮ ನಾಡಿನಲ್ಲಿ ಕಡಕೊಳ ಚಾಪೆ, ರೋಸ್‌ವುಡ್ ಇನ್ಲೇ, ಅಗರಬತ್ತಿ ತಯಾರಿಕೆ ಸೇರಿದಂತೆ ಇನ್ನಿತರ ಸಣ್ಣ ಕೈಗಾರಿಕೆಗಳಿವೆ. ಇಂತಹ ಸಣ್ಣಪುಟ್ಟ ಉದ್ಯಮಿಗಳು ಸಹ ಇಂತಹ ದೊಡ್ಡ ಕಾರ್ಯಕ್ರಮಗಳ ಪ್ರಯೋಜನ ಪಡೆದು ತಮ್ಮ ಉದ್ಯಮವನ್ನು ದೊಡ್ಡ ಮಟ್ಟಕ್ಕೆ ಬೆಳೆಯುವಂತೆ ಮಾಡಬೇಕು ಎಂದು ಹೇಳಿದರು.
ಈ ಸಮಾವೇಶವು ಮುಖ್ಯವಾಗಿ ಮಹಿಳಾ ಉದ್ಯಮಶೀಲತೆ, ಸಣ್ಣ ಕೈಗಾರಿಕೆಗಳು ಮತ್ತು ಮೈಸೂರಿನ ಸಾಂಸ್ಕೃತಿಕತೆಯ ಮೇಲೆ ಕೇಂದ್ರೀಕೃತವಾಗಿರುತ್ತದೆ. ಇಲ್ಲಿನ ಪ್ರತಿ ಪ್ರಾಂತ್ಯದ, ಪ್ರತಿ ಹಳ್ಳಿಯ ಜನರನ್ನು ತಲುಪುವ ಉದ್ದೇಶ ನಮ್ಮದು ಎಂದು ವಿವರಿಸಿದರು.
ಇದೇ ವೇಳೆ ಸಮಾವೇಶದ ಟೀಸರ್ ಅನ್ನು ಬಿಡುಗಡೆ ಮಾಡಲಾಯಿತು. ಐಲೈಫ್ ಸಂಸ್ಥಾಪಕರಲ್ಲಿ ಒಬ್ಬರಾದ ಅವಿನಾಶ್ ಪಾಲೇಗಾರ್, ಮಾಜಿ ಅಧ್ಯಕ್ಷರಾದ ಮಹದೇವ ಪ್ರಸಾದ್, ವೀರೇಶ್, ಕಾರ್ಯಕಾರಿ ಸಮಿತಿ ಸದಸ್ಯೆ ತೀರ್ಥ ಸ್ವಾಮಿ ಇತರರು ಇದ್ದರು.