ಬ್ರಾೃಂಡ್ ಕಾಪಾಡುವುದನ್ನು ಉದ್ಯಮಿಗಳು ಕಲಿಯಲಿ

34
Published on

ಯುವ ಜನತೆ ಮತ್ತು ನವ ಉದ್ಯಮಿಗಳು ಸೃಜನಶೀಲ ಬ್ರಾೃಂಡ್ ಹುಟ್ಟುಹಾಕುವ ಜತೆಗೆ ಅವುಗಳನ್ನು ರಕ್ಷಣೆ ಮಾಡಿಕೊಳ್ಳುವುದನ್ನು ಕಲಿಯಬೇಕು ಎಂದು ಹಿರಿಯ ಕಾನೂನು ಸಲಹೆಗಾರ ಡಾ.ಎಂ.ಎನ್.ಭೀಮೇಶ್ ಸಲಹೆ ನೀಡಿದರು.

‘ವಿಜಯಾನಂದ ಟ್ರಾವೆಲ್ಸ್’ ಪ್ರಸ್ತುತಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಂ.1 ಕನ್ನಡ ದಿನ ಪತ್ರಿಕೆ ‘ವಿಜಯವಾಣಿ’ ಮಾಧ್ಯಮ ಸಹಯೋಗದೊಂದಿಗೆ ಆಯೋಜಿಸಿರುವ ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್‌ಕ್ಲೇವ್‌ನಲ್ಲಿ ಭಾನುವಾರ ‘ಮುಂದಿನ ಪೀಳಿಗೆಯ ನಾಯಕರ ಸಬಲೀಕರಣ’ ವಿಷಯ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

ಇಂದು ನಮ್ಮ ಯುವ ಸಮುದಾಯ ಅನೇಕ ರೀತಿಯ ನವ ಬ್ರಾೃಂಡ್, ಉದ್ಯಮಗಳನ್ನು ಶುರು ಮಾಡುತ್ತಿದ್ದಾರೆ. ಅವರ ಬೆಳವಣಿಗೆಗೆ ಅಷ್ಟು ಮಾತ್ರ ಸಾಲುವುದಿಲ್ಲ. ಅದರ ಜತೆಗೆ ತಮ್ಮ ಬ್ರಾೃಂಡ್‌ಗಳನ್ನು ಯಾರೂ ಕಸಿದುಕೊಳ್ಳದಂತೆ ಕಾಪಾಡಿಕೊಳ್ಳಬೇಕು ಎಂದರು.

ಇಡೀ ಭಾರತರದಲ್ಲಿ ಭೌಗೋಳಿಕ ಗುರುತು (ಜಿಐ ಟ್ಯಾಗ್) ಹೆಚ್ಚಾಗಿ ಕರ್ನಾಟಕದಲ್ಲಿ ಹೆಚ್ಚು ಕಾಣಬಹುದು. ನಮ್ಮ ರಾಜ್ಯದಲ್ಲಿ ಮೈಸೂರಿನಲ್ಲಿ ಹೆಚ್ಚಿನ ಪ್ರಮಾಣದ ಜಿಐ ಟ್ಯಾಗ್ ಇದೆ. ಇಲ್ಲಿನ ಶ್ರೀಗಂಧದ ಎಣ್ಣೆ, ಮೈಸೂರಿನ ಚಿತ್ರಕಲೆ, ಮೈಸೂರು ಅಗರಬತ್ತಿ, ಮೈಸೂರು ರೋಸ್‌ವುಡ್ ಚಿತ್ರ, ನಂಜನಗೂಡು ಬಾಳೆಹಣ್ಣು ಸೇರಿದಂತೆ ಅನೇಕ ಜಿಐ ಟ್ಯಾಗ್ ನೋಡಬಹುದು. ಇವುಗಳೆಲ್ಲ ನಮ್ಮವೇ ಆಗಿದ್ದು, ಹಿಂದಿನಿಂದಲೂ ರಕ್ಷಿಸುತ್ತಿದ್ದೇವೆ. ಇದೇ ರೀತಿ ನಮ್ಮ ಯುವ ಜನತೆ ಕೂಡ ತಮ್ಮ ಬ್ರಾೃಂಡ್‌ಗಳನ್ನು ಯಾರೂ ಕದಿಯದಂತೆ ತಮ್ಮದಾಗಿಸಿಕೊಳ್ಳಬೇಕು ಎಂದರು.

ಮಹಿಳೆಯರು ಈಗಾಗಲೇ ಸಬಲರಾಗಿದ್ದಾರೆ. ವಿಶೇಷವಾಗಿ ವಕೀಲ ವೃತ್ತಿಗೆ ಮಹಿಳೆಯರು ಹೆಚ್ಚಾಗಿ ಬರುತ್ತಿರುವುದನ್ನು ಕಾಣುತ್ತಿದ್ದೇವೆ. ಯುವಕರಾಗಲಿ, ಯುವತಿಯರಾಗಲಿ ಬದ್ಧತೆ ಮುಖ್ಯವಾಗುತ್ತದೆ. ಆತ್ಮವಿಶ್ವಾಸ, ತಾಳ್ಮೆ, ಕಲಿಕಾ ಮನೋಭಾವ ಮುಖ್ಯವಾಗುತ್ತದೆ. ಆಗ ಯಾವುದೇ ಕ್ಷೇತ್ರದಲ್ಲೂ ಯಶಸ್ಸು ಪಡೆಯಬಹುದು ಎಂದರು.

ನಮ್ಮ ಮೈಸೂರು ಪ್ರವಾಸೋದ್ಯಮ ನಗರವಾಗಿದೆ. ಮೈಸೂರಿನಲ್ಲಿ ಪ್ರವಾಸೋದ್ಯಮಕ್ಕೆ ಇರುವ ಬೇಡಿಕೆ ಯಾವುದಕ್ಕೂ ಇಲ್ಲ. ಇಲ್ಲಿನ ಅರಮನೆಗಳು, ಪರಂಪರಿಕ ಕಟ್ಟಡಗಳು ಸೇರಿದಂತೆ ಅನೇಕ ಪ್ರವಾಸಿ ತಾಣಗಳಿವೆ. ಅವುಗಳನ್ನು ಅಭಿವೃದ್ಧಿ ಮಾಡಿದರೆ ಮೈಸೂರಿನ ಹೋಟೆಲ್, ಟ್ರಾವೆಲ್ ಸೇರಿದಂತೆ ಎಲ್ಲ ಉದ್ಯಮಗಳು ಅಭಿವೃದ್ಧಿಯಾಗುತ್ತವೆ. ಪ್ರವಾಸೋದ್ಯಮ ಸಂಬಂಧಿಸಿದ ಹೊಸ ಹೊಸ ಉದ್ಯಮಗಳನ್ನು ಆರಂಭಿಸಬಹುದಾಗಿದೆ ಎಂದರು.

ಮಲೇಷಿಯಾದಲ್ಲಿ ನಮ್ಮಷ್ಟು ಇಲ್ಲದೆ ಇದ್ದರೂ ಪ್ರವಾಸೋದ್ಯಮ ಕೇಂದ್ರವಾಗಿ ಆ ದೇಶವನ್ನು ಅಭಿವೃದ್ಧಿ ಮಾಡಿದ್ದಾರೆ. ನಮ್ಮಲ್ಲಿ ಪ್ರವಾಸೋದ್ಯಮಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಇದ್ದರೂ ಬಳಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಿ.ಶಿವಶಂಕರ್, ಡಾ.ರಾಘವೇಂದ್ರ ಮಾತನಾಡಿದರು. ಲೇಖಕ ಡಾ.ಧರ್ಮಪ್ರಸಾದ್ ನಿರ್ವಹಣೆ ಮಾಡಿದರು.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net