

ಹೊಸದುರ್ಗ: ಗೆದ್ದೆ ಗೆಲ್ಲುತ್ತೇನೆ. ಅಸಾಧ್ಯ ಎಂಬುದು ಯಾವುದು ಇಲ್ಲ ಎನ್ನುವ ಮನೋಭಾವನೆಯನ್ನು ಬೆಳೆಸಿಕೊಂಡಾಗ ಮಾತ್ರ ಬದುಕಿನಲ್ಲಿ ಯಶಸ್ಸುಗಳಿಸಲು ಸಾಧ್ಯವಾಗಲಿದೆ ಎಂದು ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಸಿದ್ದರಾಮೇಶ್ವರ ಸಭಾಂಗಣದಲ್ಲಿ ಭಾನುವಾರ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿ, ಸಾಧನೆ ಎಂಬುದು ಸುಲಭವಲ್ಲ.
ಮನುಷ್ಯನಿಗೆ ಛಲ ಹಾಗೂ ಮನೋಬಲವಿದ್ದರೆ ಎಲ್ಲವನ್ನು ಸಾಧಿಸಬಹುದು. ಸೋಲು ಗೆಲುವಿನ ಮೂಲವಾಗಬೇಕು ಎಂದರು.
ಜೀವನದಲ್ಲಿ ಯಶಸ್ಸು ಸಾಧಿಸಲು ಪದವಿ ಮುಖ್ಯವಲ್ಲ ಉತ್ತಮ ಸಂಸ್ಕಾರದ ಅಗತ್ಯವಿದೆ. ಪ್ರತಿಭಾನ್ವಿತರು ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತವಾಗದೆ ಬಹುಮುಖ ಪ್ರತಿಭೆಯಾಗಿ ಸಾಧನೆ ಮಾಡಬೇಕು ಎಂದು ತಿಳಿಸಿದರು.
ಸಾಧನೆ ಮಾಡಿ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಬಡ ಪ್ರತಿಭಾನ್ವಿತರಿಗೆ ಸಹಾಯ ಮಾಡುವ ಮನೋಭಾವನೆ ಬೆಳಸಿಕೊಳ್ಳಬೇಕು. ಸಮಾಜದಲ್ಲಿ ಶ್ರೀಮಂತರಿಗೆ ಕೊರತೆಯಿಲ್ಲ.
ಅವರು ತಮ್ಮಲ್ಲಿರುವ ಹಣವನ್ನು ವ್ಯರ್ಥವಾಗಿ ಖರ್ಚು ಮಾಡದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗಳಿಗೆ ನೆರವಾಗಬೇಕು ಎಂದರು.
ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ ಮಾತನಾಡಿ ವೀರಶೈವ ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ತಿರ್ಮಾನ ತೆಗೆದುಕೊಳ್ಳಬೇಕಿದೆ.
ಲಿಂಗಾಯತ ಧರ್ಮದವರಾಗಿರುವ ನಾವುಗಳು ಸಮಾಜಕ್ಕೆ ಮಾದರಿಯಾಗಿ ಬದುಕಬೇಕಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಎಲ್.ಜಯಪ್ಪ ಮಾತನಾಡಿ, ಕಳೆದ 13 ವರ್ಷಗಳಿಂದ ಶೈಕ್ಷಣಿಕವಾಗಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸುವ ಕೆಲಸವನ್ನು ಸಂಘ ಮಾಡುತ್ತಿದೆ.
ಸಮುದಾಯದ ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ನೀಡುವ ಸೆಮಿನಾರ್, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕಾರ್ಯಾಗಾರಗಳನ್ನು ನಡೆಸುತ್ತಿದೆ ಎಂದರು.
ಭಾರತೀಯ ಅಂಧರ ಮಹಿಳಾ ಕ್ರಿಕೆಟ್ ತಂಡದ ನಾಯಕಿ ವರ್ಷ ಉಮಾಪತಿ ಅವರನ್ನು ಗೌರವಿಸಲಾಯಿತು.
ಮಕ್ಕಳು ದೃಢ ಸಂಕಲ್ಪ ಕೈಗೊಳ್ಳಿ: ಮಕ್ಕಳು ತಮ್ಮಲ್ಲಿರುವ ಸಮಸ್ಯೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ನನ್ನಿಂದ ಸಾಧ್ಯವಾಗುತ್ತದೆ ಎಂದು ತಿಳಿದರೆ ಎಲ್ಲರೂ ಸಾಧಕರಾಗಬಹುದು.
ಇದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ನನಗೆ ಕಣ್ಣು ಕಾಣಿಸುವುದಿಲ್ಲ ಎಂದು ಹಿಂದಕ್ಕೆ ಸರಿದಿದ್ದರೆ ಸಾಧನೆ ಅಸಾಧ್ಯವಾಗುತ್ತಿತ್ತು. 2019ರಲ್ಲಿ ರಾಜ್ಯ ತಂಡದಲ್ಲಿ ಸ್ಥಾನ ಪಡೆದೆ. ಬಳಿಕ ನಾಯಕಿಯಾದೆ.
ಶತಕ ಬಾರಿಸಿದ್ದೇನೆ. 17 ಎಸೆತಗಳಲ್ಲಿ 50 ರನ್‌ಗಳಿಸಿದ್ದೇನೆ. 2023ರಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದು, ಚಿನ್ನದ ಪದಕ ಗೆದ್ದಿದ್ದೇವೆ ಎಂದು ಭಾರತ ಅಂಧರ ಮಹಿಳಾ ಕ್ರಿಕೆಟ್ ತಂಡದ ನಾಯಕಿ ವರ್ಷ ಉಮಾಪತಿ ಹೇಳಿದರು.
ಕುಂಚಿಟಿಗ ಪೀಠದ ಶಾಂತವೀರ ಸ್ವಾಮೀಜಿ, ಶಾಸಕ ಬಿ.ಜಿ.ಗೋವಿಂದಪ್ಪ, ಮಾಜಿ ಶಾಸಕ ಟಿ.ಎಚ್.ಬಸವರಾಜಪ್ಪ, ಆರ್.ಹನುಮಂತಪ್ಪ, ರೇಣುಕಾ ಪ್ರಸನ್ನ, ಗುರುಸ್ವಾಮಿ, ಬಿ.ಪಿ.ಓಂಕಾರಪ್ಪ ಇತರರಿದ್ದರು.