

ಸಕಲೇಶಪುರ: ವೀರಶೈವ-ಲಿಂಗಾಯತ ಸಮುದಯ ರಾಜಕೀಯವಾಗಿ ಹಂತ ಹಂತವಾಗಿ ಪ್ರಾತಿನಿಧ್ಯ ಕಳೆದುಕೊಳ್ಳುತ್ತಿದೆ ಎಂದು ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಷಡಕ್ಷರಿ ಹೇಳಿದರು.
ಮಲೆನಾಡ ವೀರಶೈವ ಸಮಾಜ ವತಿಯಿಂದ ಬುಧವಾರ ಆಯೋಜಿಸಿದ್ದ ಗೌರವ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1980ರ ದಶಕದಲ್ಲಿ ವೀರಶೈವ ಜನಾಂಗದ ಕನಿಷ್ಠ ನೂರು ಜನರು ವಿಧಾನಸಭೆ ಪ್ರತಿನಿಧಿಸುತ್ತಿದ್ದರು. ಅಂದು ಬಿ.ಡಿ.ಜತ್ತಿ, ವೀರೇಂದ್ರ ಪಾಟೀಲ್‌ನಂತಹ ಹಲವು ದಿಗ್ಗಜರು ನಮ್ಮ ಸಮುದಾಯವನ್ನು ಪ್ರತಿನಿಧಿಸಿದ್ದರು. ಇದೀಗ ಹಂತಹಂತವಾಗಿ ವಿಧಾನಸಭೆಯಲ್ಲಿ ನಮ್ಮ ಸಮುದಾಯದ ಪ್ರತಿನಿಧ್ಯ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಮುದಾಯ ಮುನ್ನಡೆಸುವ ನಾಯಕರ ಕೊರತೆ ಹೆಚ್ಚಾಗಿ ಕಾಡುತ್ತಿದೆ. ಇಂದು ಯುವ ಜನಾಂಗ ಖಾಸಗಿ ಬದುಕಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಇದರಿಂದ ಭವಿಷ್ಯದಲ್ಲಿ ಜನಾಂಗದ ನಾಯಕರ ಕೊರತೆ ಎದುರಾಗಲಿದೆ ಎಂದರು.
ಮಲೆನಾಡು ವೀರಶೈವ ಸಮಾಜದಿಂದ ಷಡಕ್ಷರಿ ಅವರನ್ನು ಗೌರವಿಸಲಾಯಿತು. ಸಮಾಜದ ಅಧ್ಯಕ್ಷ ದಿವಾನ್, ಬಿ.ಡಿ.ಬಸವಣ್ಣ, ನರೇಶ್ ಮುಂತಾದವರಿದ್ದರು.