

ಹೊನ್ನಾಳಿ: ವೀರಶೈವ ಹಾಗೂ ಲಿಂಗಾಯತ ಇವೆರಡೂ ಒಂದೇ. ಆದರೆ ಕೆಲವರು ತಮ್ಮ ಸ್ವಾರ್ಥಕ್ಕೆ ಮನಸ್ಸಿಗೆ ಬಂದಂತೆ ವ್ಯಾಖ್ಯಾನ ಮಾಡುತ್ತಿದ್ದಾರೆ. ಇದು ನಿಲ್ಲಬೇಕು. ಇಂತಹ ವಿವಾದ ಹುಟ್ಟು ಹಾಕುವವರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಬಾರದು ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಕಿಡಿಕಾರಿದರು.
ಭಾನುವಾರ ಹಿರೇಕಲ್ಮಠದಲ್ಲಿ ಏರ್ಪಡಿಸಿದ್ದ ಜಂಗಮ ವಟುಗಳಿಗೆ ಆಯೋಜಿಸಿದ್ದ ಲಿಂಗ ದೀಕ್ಷಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವೀರಶೈವ ಧರ್ಮ ಸಂಸ್ಥಾಪಕರು ನಮ್ಮ ಪಂಚಪೀಠಾಧ್ಯಕ್ಷರುಗಳು. ವರ್ಷಕ್ಕೊಮ್ಮೆಯಾದರೂ ಪೀಠಗಳ ದರ್ಶನ ಮಾಡಿ ಸಿದ್ಧಾಂತ ಶಿಖಾಮಣಿ ಅಧ್ಯಯನ ಮಾಡಬೇಕು. ನಾವು ಯಾವಾಗಲು ಲಿಂಗ,ರುದ್ರಾಕ್ಷಿ,ಬಸ್ಮ, ಹಾಗೂ ಗಂಧವನ್ನು ಧಾರಣೆ ಮಾಡಬೇಕು. ನಮ್ಮ ಕೆಟ್ಟ ಹಣೆಬರಹವನ್ನು ಬಸ್ಮ ಬದಲಾಯಿಸುತ್ತದೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.
ಭಾರತ ಧಾರ್ಮಿಕತೆಯ ತೊಟ್ಟಿಲು, ಇಲ್ಲಿ ಎಲ್ಲ ಧರ್ಮವೂ ನೆಲೆ ನಿಂತಿದೆ. ಸೌಹಾರ್ದತೆಗೆ ಮತ್ತೊಂದು ಹೆಸರೇ ಭಾರತ, ಸಂಪತ್ಭರಿತವಾದ ರಾಷ್ಟ್ರದಲ್ಲಿ ಎಲ್ಲವೂ ಇದೆ. ಹಿಂದೆ ಋಷಿಮುನಿಗಳು ತಮ್ಮ ದಿವ್ಯ ದೃಷ್ಟಿಯಿಂದಲೆ ಎಲ್ಲವೂ ಕಂಡುಹಿಡಿದಿದ್ದರು. ಆದನ್ನು ಗ್ರಂಥರೂಪಕ್ಕೆ ಇಳಿಸಿದ್ದರಿಂದ ಇತರ ರಾಷ್ಟ್ರಗಳು ಇದನ್ನೇ ಅಧ್ಯಯನ ಮಾಡಿ ನಾವು ಕಂಡು ಹಿಡಿದ್ದಿದ್ದೇವೆ ಎನ್ನುತ್ತಾರೆ. ಭಾರತವನ್ನು ಇತರ ರಾಷ್ಟ್ರಗಳು ಯಾವಾಗಲೂ ಗುರುಸ್ಥಾನದಲ್ಲೇ ನೋಡುತ್ತಾರೆ ಎಂದರು.
ನಾವು ಜಾತಿಯಿಂದ ಜಂಗಮರಾಗಬಾರದು. ಆಚಾರ, ವಿಚಾರ ಹಾಗೂ ಆಚರಿಸುವ ಸಾಂಪ್ರದಾಯಗಳಿಂದ ನಾವು ಜಂಗಮರಾಗಬೇಕು. ಆಗ ನಿರಂತರವಾಗಿ ಸಮಾಜ ನಮಗೆ ಮನ್ನಣೆ ನೀಡುತ್ತದೆ, ಈ ಬಗ್ಗೆ ನಾವು ಜಾಗೃತರಾಗಬೇಕು. ಆಚಾರ-ವಿಚಾರಗಳನ್ನು ಅಳವಡಿಸಿಕೊಂಡು ಇತರರಿಗೆ ಆದರ್ಶವಾಗಿರಬೇಕು ಎಂದು ದೀಕ್ಷೆ ಪಡೆದ ವಟುಗಳಿಗೆ ಕಿವಿಮಾತು ಹೇಳಿದರು.
ಲಿಂಗ ದೀಕ್ಷಾ ಪಡೆದ ಪ್ರತಿಯೊಬ್ಬ ಜಂಗಮ ವಟುಗಳಲ್ಲಿ ಸದ್ವಿಚಾರ ಹಾಗೂ ಸದಾಚಾರಗಳತ್ತ ಕೇಂದ್ರಿಕೃತವಾಗಿರುತ್ತದೆ. ಅದಕ್ಕೆ ಪೂರಕವಾದ ವಾತಾವರಣ ಹಾಗೂ ಸಂಸ್ಕಾರ ಸಮಾಜ, ಕುಟುಂಬದಿಂದ ದೊರೆಯಬೇಕು ಎಂದರು.
ಪ್ರತಿಯೊಬ್ಬರೂ ಕನಿಷ್ಟ ಎರಡು ಬಾರಿಯಾದರೂ ಲಿಂಗಪೂಜೆ ಮಾಡಬೇಕು. ಕೇವಲ ಕಾಟಚಾರಕ್ಕೆ ಲಿಂಗಪೂಜೆ ಮಾಡಿದರೆ ಅದು ಪ್ರಯೋಜನ ಆಗುವುದಿಲ್ಲ. ನಿತ್ಯ ಪೂಜೆ ಮಾಡಿದರೆ ಆತ ಸಂಸ್ಕಾರವಂತ ಹಾಗೂ ಸಮಾಜಮುಖಿಯಾಗುತ್ತಾನೆ ಎಂದರು.
ದೀಕ್ಷೆ ಪಡೆದು ಇವತ್ತು ಒಂದು ದಿನ ಭಿಕ್ಷೆ ಮಾಡಿದರೆ ಪ್ರಯೋಜನವಿಲ್ಲ, ಪ್ರತಿವರ್ಷ ಐದು ಮನೆಯಾದರೂ ಭಿಕ್ಷೆ ಬೇಡಬೇಕು ಆಗ ಮಾತ್ರ ಇದರ ಮಹತ್ವ ಎಲ್ಲರಿಗೂ ಅರ್ಥವಾಗುತ್ತದೆ, ಭಿಕ್ಷೆ ಬೇಡುವುದು ಕೀಳಲ್ಲ ಎಂದು ಶ್ರಾವಣ ಮಾಸದ ಭಿಕ್ಷೆ ಬಗ್ಗೆ ಮಹತ್ವ ತಿಳಿಸಿಕೊಟ್ಟರು.
116 ಯುವ ವಟುಗಳಿಗೆ ಹಾಗೂ 14 ಮಹಿಳೆಯರಿಗೆ ದೀಕ್ಷೆ ನೀಡಲಾಯಿತು,ದೀಕ್ಷೆಯ ನಂತರ ಎಲ್ಲ 120 ವಟುಗಳು ಪಟ್ಟಣದಲ್ಲಿ ಭಿಕ್ಷೆ ಮಾಡಿ ಬಂದರು.
ಹಾರನಹಳ್ಳಿ ರಾಮಲಿಂಗೇಶ್ವರ ಶ್ರೀಮಠದ ವಿಶ್ವಾರಾಧ್ಯ ಶಿವಾಚಾರ್ಯ, ಕೋಣಂದುರು ಶ್ರೀಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ವಟುಗಳಿಗೆ ಆಶೀರ್ವಚನ ನೀಡಿದರು.
ಹಿರೇಕಲ್ಮಠದ ವ್ಯವಸ್ಥಾಪಕ ಎಂಪಿಎಂ ಚನ್ನಬಸವಯ್ಯ, ಬಸುವರಾಜಶಾಸ್ತ್ರಿ, ವಿದ್ಯಾದರಶಾಸ್ತ್ರಿ, ಪುರಸಭಾ ಸದಸ್ಯ ಹೊಸಕೇರಿ ಸುರೇಶ್ ಇದ್ದರು.