

ಸಿದ್ದಾಪುರ: ಇಲ್ಲಿನ ಆರಾಧ್ಯ ದೈವ ಶ್ರೀ ವೀರಪ್ಪಯ್ಯ ತಾತ ಜಾತ್ರಾ ಮಹೋತ್ಸವ ಮಂಗಳವಾರ ಸಡಗರದಿಂದ ಜರುಗಿತು.
ಇದನ್ನೂ ಓದಿ: ರುದ್ರಭೂಮಿ ಜಾಗ ಒತ್ತುವರಿ ತೆರವಿಗೆ ಕ್ರಮ
ಈ ನಿಮಿತ್ತ ಬೆಳಗ್ಗೆ ದೇವಸ್ಥಾನದಲ್ಲಿ ಗಣೇಶ ತಾತ, ಉಮೇಶ್ ತಾತ, ಸಿದ್ಧಾರ್ಥ, ವಿನಯ್ ಕುಮಾರ್, ಶಿವಕುಮಾರ ಸ್ವಾಮಿ, ವೀರಪ್ಪಯ್ಯ ಸ್ವಾಮಿ, ಮಹೇಂದ್ರ ಕುಮಾರ್, ಜೀತೇಂದ್ರ ಕುಮಾರ್, ವೀರೇಶ್ ಗಿಂಡಿಮಠ ಇವರ ನೇತೃತ್ವದಲ್ಲಿ ವೀರಪ್ಪಯ್ಯ ತಾತ ಹಾಗೂ ಬಸವಣ್ಣಯ್ಯ ತಾತನ ಕರ್ತೃ ಗದ್ದುಗೆಗೆ ಅಭಿಷೇಕ, ಬಿಲ್ವಾರ್ಚನೆ, ಕುಂಕುಮಾರ್ಚನೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ತಾಷ್, ಡೊಳ್ಳು ಸೇರಿ ವಿವಿಧ ವಾದ್ಯವೃಂದಗಳ ಮೂಲಕ ಗಂಗೆಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ವೀರಪ್ಪಯ್ಯ ತಾತ ಹಾಗೂ ಬಸವಣ್ಣಯ್ಯ ತಾತನ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಯಿತು. ಮಹಿಳೆಯರು ಕಳಸ-ಕನ್ನಡಿಯನ್ನೊತ್ತು ಜಾತ್ರೆಗೆ ಮೆರುಗು ನೀಡಿದರು.
ಅನ್ನಸಂತರ್ಪಣೆ ನಡೆಯಿತು. ಒಂದು ದಿನ ಮುನ್ನ ರಾತ್ರಿಪೂರ್ತಿ ಭಜನಾ ತಂಡಗಳು ಭಜನೆ ಗೀತೆಗಳ ಮೂಲಕ ದೇವರ ಸ್ಮರಣೆ ಮಾಡಿದವು. ಗಂಗಾವತಿ, ದಾಸನಾಳ, ಸಿಂಧನೂರು, ಬಳ್ಳಾರಿ, ರಾಯಚೂರು, ಈಳಿಗನೂರು, ಉಳೇನೂರು, ಬರಗೂರು, ಕೊಟ್ನೆಕಲ್, ಹುಳ್ಕಿಹಾಳ, ಬೂದಗುಂಪಾ, ಕಾರಟಗಿ ಸೇರಿ ಇತರ ಊರಿನ ಜನರು ಇದ್ದರು.
09 ಸಿದ್ದಾಪುರ 01ಎ
ಸಿದ್ದಾಪುರದಲ್ಲಿ ಶ್ರೀ ವೀರಪ್ಪಯ್ಯ ತಾತನ ಜಾತ್ರೆ ನಿಮಿತ್ತ ಮಂಗಳವಾರ ಪಲ್ಲಕ್ಕಿ ಮೆರವಣಿಗೆ ಜರುಗಿತು.