

ಮಂಗಳೂರು: ಎತ್ತಿನ ಹೊಳೆ ಯೋಜನೆ ಮುಗಿದ ಅಧ್ಯಾಯ. ಹಳೇ ವಿಚಾರ ಮತ್ತೆ ಪ್ರಶ್ನೆ ಮಾಡಬೇಡಿ. ಈ ವಿಷಯದಲ್ಲಿ ಅನೇಕ ಬಾರಿ ಉತ್ತರಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಅವರು ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕರಾವಳಿಯ ಜನರಿಗೆ ತೊಂದರೆಯಾಗುವ ಈ ಯೋಜನೆಯನ್ನು ಮುಂದಾಲೋಚನೆ ಇಲ್ಲದೆ ನೀವು ಅನುಷ್ಠಾನಗೊಳಿಸಲು ಹೊರಟಿದ್ದೀರಿ. 23 ಸಾವಿರ ಕೋಟಿ ರೂ ಖರ್ಚು ಮಾಡುತ್ತಿದ್ದೀರಿ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಬಿಜೆಪಿಯವರು ಇದನ್ನು ನಿಲ್ಲಿಸಿದ್ದಾರಾ ಎಂದು ಮರು ಪ್ರಶ್ನೆ ಹಾಕಿದರು.
ಕರಾವಳಿ ಜನರಿಗೆ ನೀವು ಈ ಪ್ರಶ್ನೆಗೆ ಉತ್ತರ ಕೊಡಬೇಕು ಎನ್ನುವ ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ಅವರು, ನಾನು ಎಲ್ಲಿ ಉತ್ತರ ಕೊಡಬೇಕು ಅಲ್ಲಿ ಕೊಡುತ್ತೇನೆ . ನೆಕ್ಸ್‌ಟ್ ಬೇರೆ ಏನಾದರೂ ಪ್ರಶ್ನೆಯಿದ್ದರೆ ಕೇಳಿ ಎಂದರು.
ಚಿಕ್ಕಬಳ್ಳಾಪುರ ದಲ್ಲಿ ಮತ್ತೆ ಸ್ಪರ್ಧೆಗೆ ಮುಂದಾಗಿದ್ದೀರಿ. ಅಲ್ಲಿಯ ಜನರಿಗೂ ನೀವು ಉತ್ತರಿಸಬೇಕಾಗುತ್ತದೆ ಎನ್ನುವ ಪ್ರಶ್ನೆಗೆ, ಅಲ್ಲಿಯ ಜನರಿಗೆ ನಾನು ಉತ್ತರಿಸುತ್ತೇನೆ ಎಂದು ಮತ್ತೆ ಅವರು ಸಿಡಿಮಿಡಿಗೊಂಡರು.