ವೀರಮದಕರಿ ನಾಯಕ ವೃತ್ತ ನಿರ್ಮಾಣ: ಜಯಂತ್ಯುತ್ಸವದಲ್ಲಿ ಶಾಸಕ ಟಿ. ರಘುಮೂರ್ತಿ ಘೋಷಣೆ

CLK Jayanti
Published on
ಚಳ್ಳಕೆರೆ: ಚಿತ್ರದುರ್ಗದ ಪಾಳೆಯಗಾರ ವೀರಮದಕರಿ ನಾಯಕನ ಅಪ್ರತಿಮ ಹೋರಾಟದ ಬದುಕು ಇತಿಹಾಸದ ದಾಖಲೆಯಾಗಿ ಉಳಿದಿದೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು. ನಗರದಲ್ಲಿ ನಾಯಕ ಸಮುದಾಯದಿಂದ ಆಯೋಜಿಸಲಾಗಿದ್ದ ವೀರಮದಕರಿ ನಾಯಕ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆದರ್ಶಗಳನ್ನು ಪೋಷಿಸುವ ಜವಾಬ್ದಾರಿ

ನಗರದ ಬಳ್ಳಾರಿ ರಸ್ತೆಯಲ್ಲಿರುವ ವೀರಮದಕರಿ ನಾಯಕ ವೃತ್ತದಲ್ಲಿ ನಡೆದ ಜಯಂತಿ ಕಾರ್ಯಕ್ರಮದಲ್ಲಿ ರಾಜರ ಕಾಲದ ಆಯುಧಗಳಿಗೆ ಪೂಜೆ ಸಲ್ಲಿಸಿ ಶಾಸಕರು ಮಾತನಾಡಿದರು. "ಚಿತ್ರದುರ್ಗದ ಏಳು ಸುತ್ತಿನ ಕೋಟೆಯನ್ನು ತಮ್ಮ ಶೌರ್ಯ, ಸಾಹಸದಿಂದ ರಕ್ಷಿಸಿ ಆಡಳಿತ ಮಾಡಿದ ಕೀರ್ತಿ ವೀರಮದಕರಿ ನಾಯಕರಿಗೆ ಸಲ್ಲುತ್ತದೆ. ಇಂತಹ ಮಹನೀಯರ ಆದರ್ಶಗಳನ್ನು ಪೋಷಿಸುವ ಜವಾಬ್ದಾರಿ ಸಮಾಜದ ಮೇಲಿದೆ" ಎಂದರು.

ಹಾಗೆಯೇ, ವಿಸ್ತಾರವಾಗಿ ಬೆಳೆಯುತ್ತಿರುವ ನಗರದಲ್ಲಿ ಸಮುದಾಯದ ಒತ್ತಾಸೆಯಂತೆ ವೀರಮದಕರಿ ನಾಯಕ ವೃತ್ತವನ್ನು ನಾಮಕರಣ ಮಾಡಲಾಗಿದೆ. ಈ ವೃತ್ತದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಶಾಸಕರ ಮಾತು ಗಮನ ಸೆಳೆಯಿತು

ಕಾರ್ಯಕ್ರಮದ ಆರಂಭದಲ್ಲಿ, "ಸಮುದಾಯದ ಕಾರ್ಯಗಳು ಸಂಘಟಿತವಾಗಿ ನಡೆಯಬೇಕು. ಇದು ಒಂದು ಪಕ್ಷ ಅಥವಾ ಕೆಲವೇ ಮುಖಂಡರಿಗೆ ಸೀಮಿತವಾಗಬಾರದು. ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಯಾಕೆ ಕಾಣುತ್ತಿಲ್ಲ? ಅವರನ್ನು ಕರೆದಿಲ್ಲವೇ?" ಎಂದು ಪ್ರಶ್ನಿಸಿದ ಶಾಸಕರು, "ಒಂದು ವೇಳೆ ಅವರು ಬರುವುದಾದರೆ ಅವರಿಗಾಗಿ ಒಂದು ಗಂಟೆಯಾದರೂ ಕಾಯುತ್ತೇನೆ" ಎಂದು ಹೇಳಿದ್ದು ಜನರ ಗಮನ ಸೆಳೆಯಿತು.

ಪ್ರತಿಮೆ ನಿರ್ಮಾಣಕ್ಕೆ ಮನವಿ

ಇದೇ ವೇಳೆ ಮಾತನಾಡಿದ ಡಾ. ರಾಮರಾಜ್, "ಜನಾಂಗದ ಬೇಡಿಕೆಯಂತೆ ವೀರಮದಕರಿ ನಾಯಕ ವೃತ್ತ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಇಲ್ಲಿ ಮದಕರಿ ನಾಯಕನ ಕಂಚಿನ ಪ್ರತಿಮೆಯನ್ನು ಸ್ಥಾಪಿಸಬೇಕು. ಪ್ರತಿ ವರ್ಷ ವಾಲ್ಮೀಕಿ ಜಯಂತಿ ಆಚರಣೆ ಮಾಡಿದಂತೆ ಮದಕರಿ ನಾಯಕ ಜಯಂತಿಯನ್ನೂ ಆಚರಿಸಬೇಕು. ಚಿತ್ರದುರ್ಗ ಇತಿಹಾಸದ ರಾಜರಾಗಿರುವ ಮದಕರಿ ನಾಯಕರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ಶಾಸಕರು ಆದ್ಯತೆ ನೀಡಬೇಕು" ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಬಿ. ಶಿಲ್ಪಾ, ಉಪಾಧ್ಯಕ್ಷೆ ಕವಿತಾ, ಸದಸ್ಯರಾದ ಸುಮಕ್ಕ, ಆರ್. ಮಂಜುಳಾ, ಕವಿತಾ, ಸುಮಾ, ಚಳ್ಳಕೆರಪ್ಪ, ಎಂ.ಜೆ. ರಾಘವೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ. ಶಶಿಧರ, ಮುಖಂಡರಾದ ಬಾಳೆಕಾಯಿ ರಾಮ್‌ದಾಸ್, ಸಿ.ಟಿ. ಶ್ರೀನಿವಾಸ್, ಟಿ.ಜೆ. ವೆಂಕಟೇಶ್, ಈಶ್ವರನಾಯಕ, ಜೆ.ಕೆ. ತಿಪ್ಪೇಶ್, ಸುಮಾ ಭರಮಯ್ಯ, ಸೂರನಾಯಕ, ಪ್ರಶಾಂತ್‌ನಾಯಕ, ಎಂ. ಚೇತನ್‌ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net