ನಂದಗಡದ ವೀರಭೂಮಿ ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ ಶೀಘ್ರ ಉದ್ಘಾಟನೆ

14dvk 5
Published on

ಖಾನಾಪುರ: ತಾಲೂಕಿನ ನಂದಗಡದ ವೀರಭೂಮಿ ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ ಶೀಘ್ರ ಉದ್ಘಾಟಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದರು.

ಮಂಗಳವಾರ ನಂದಗಡಕ್ಕೆ ಭೇಟಿ ನೀಡಿದ್ದ ಅವರು, ವೀರಭೂಮಿ ಮ್ಯೂಸಿಯಂ, ವಸ್ತು ಸಂಗ್ರಹಾಲಯ, ಮ್ಯೂಸಿಯಂ ಮುಖ್ಯ ದ್ವಾರ, ಸಂಗೊಳ್ಳಿ ರಾಯಣ್ಣ ಸ್ಮರಣೀಯ ಪ್ರತಿಮೆಗಳು, ಸಾರ್ವಜನಿಕ ಪ್ರವೇಶದ ಟಿಕೆಟ್​ ಕೌಂಟರ್​, ಅಲ್ಪೋಪಹಾರ ಗೃಹ, ವಾಹನಗಳ ಪಾರ್ಕಿಂಗ್​ ವ್ಯವಸ್ಥೆ, ಶೌಚಗೃಹ, ಕಾಂಪೌಂಡ್​, ದೀಪಾಲಂಕಾರ ಸೇರಿ ವಿವಿಧ ಕಾಮಗಾರಿ ಪರಿಶೀಲಿಸಿ ಕಾಲಮಿತಿಯೊಳಗೆ ಉಳಿದ ಕಾಮಗಾರಿ ಮುಗಿಸುವಂತೆ ಸಂಬಂಧಿಸಿದವರಿಗೆ ಸೂಚಿಸಿದರು.

ಇಲ್ಲಿ 28 ಕೋಟಿ ರೂ. ಅನುದಾನದಲ್ಲಿ ಇನ್ನೂ ಹೆಚ್ಚಿನ ಕಾಮಗಾರಿ ಕೈಗೆತ್ತಿಕೊಳ್ಳುವ ಉದ್ದೇಶದಿಂದ ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ಅ.29ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಕರೆಯಲಾಗಿರುವ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆದು ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಜತೆಗೆ ಯೋಜನೆಗಳಲ್ಲಿ ಕೆಲವು ಬದಲಾವಣೆಯಾಗುವ ಸಾಧ್ಯತೆಯಿದ್ದು, ಸಭೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ. ರಾಯಣ್ಣ ಮೂರ್ತಿ ಸಮೀಪದಲ್ಲಿನ ಕೆರೆಗೆ ಊರಿನ ಚರಂಡಿ ನೀರು ಸೇರುತ್ತಿದ್ದು, ತಡೆಗೋಡೆ ನಿರ್ಮಿಸಲು ಜಿಪಂನಿಂದ 2 ಕೋಟಿ ರೂ. ಅನುದಾನ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿತ್ತು. ಈಗಾಗಲೇ ಜಿಪಂ ಸಿಇಒ 50 ಲಕ್ಷ ರೂ. ಅನುದಾನ ಕಾಯ್ದಿರಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಚ್​.ಎಂ.ರೇವಣ್ಣ ಮಾತನಾಡಿ, ರಾಯಣ್ಣನ ಶೌರ್ಯಭೂಮಿ ಸಂಗೊಳ್ಳಿಯಲ್ಲಿ ರಾಯಣ್ಣ ಜೀವನ ಚರಿತ್ರೆ ಸಾರುವ ಮೂರ್ತಿಗಳಿರುವ ರಾಕ್​ ಗಾರ್ಡನ್​ ಪ್ರೇಕ್ಷಕರನ್ನು ಸೆಳೆಯುವಂತಿದೆ. ದೇಶದ ಉತ್ತಮ ಶಾಲೆಗಳಲ್ಲಿ ಸಂಗೊಳ್ಳಿಯ ಸೈನಿಕ ಶಾಲೆಯೂ ಒಂದಾಗಿದ್ದು, ಪ್ರವೇಶಾತಿಯಲ್ಲಿ ಸ್ಥಳಿಯ ಮತ್ತು ರಾಜ್ಯದ ಮಕ್ಕಳಿಗೆ ಮೊದಲ ಆದ್ಯತೆ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ ದಳವಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹರ್ಷ, ಖಾನಾಪುರ ತಹಸೀಲ್ದಾರ್​ ದುಂಡಪ್ಪ ಕೋಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net