ನಾಳೆ ವೀರಭದ್ರೇಶ್ವರ ರಥೋತ್ಸವ

Veerabhadreshwara Chariot Festival tomorrow
ಚಿತ್ತವಾಡಗಿ ಶ್ರೀ ವೀರಭದ್ರದೇವರು
Published on

ಹುನಗುಂದ: ಸಮೀಪದ ಚಿತ್ತವಾಡಗಿಯ ಆರಾಧ್ಯ ದೈವ ಶ್ರೀ ವೀರಭದ್ರೇಶ್ವರ ದೇವರ ರಥೋತ್ಸವ ಏ.8ರಂದು ಜರುಗಲಿದೆ.

ಜಾತ್ರೆ ಅಂಗವಾಗಿ ಬೆಳಗ್ಗೆ 6 ಗಂಟೆಗೆ ವೀರಭದ್ರಸ್ವಾಮಿಗೆ ಮಹಾರುದ್ರಾಭಿಷೇಕ, ಚಿತ್ತವಾಡಗಿ ಗ್ರಾಮದಿಂದ ಸುಮಂಗಲೆಯರು ಕಳಸ, ಬಾಜಾ ಭಜಂತ್ರಿಯ ಜತೆಗೆ ಕುಂಭಮೇಳದೊಂದಿಗೆ ವೀರಭದ್ರೇಶ್ವರ ಪಲ್ಲಕ್ಕಿ ದೇವಸ್ಥಾನಕ್ಕೆ ಬರಲಿದೆ.

ಮಧ್ಯಾಹ್ನ 12 ಗಂಟೆಗೆ ಐಹೊಳೆ ಗ್ರಾಮದ ಜಗದೀಶ ಹಿರೇಮಠ ನೇತೃತ್ವದಲ್ಲಿ ಅಗ್ನಿಕುಂಡ ಪ್ರವೇಶ, ವೀರಗಾಸೆ ಮತ್ತು ಪುರವಂತಿಕೆ ಜರುಗುವುದು.

ಸಂಜೆ 4 ಗಂಟೆಗೆ ಹುಚ್ಚಯ್ಯನ ಉತ್ಸವ ನೆರವೇರಲಿದೆ. ಹಿರೇಬಾದವಾಡಗಿ ಭಕ್ತರಿಂದ ಕಳಸ, ನಾಗೂರು ಭಕ್ತರಿಂದ ನಂದಿಕೋಲು, ಯಡಹಳ್ಳಿ ಭಕ್ತರಿಂದ ತೇರಿನ ಮೇಲಿನ ಬೆಳ್ಳಿ ಛತ್ರಿ, ವೀರಾಪುರ ಭಕ್ತರಿಂದ ತೇರಿನ ಹಗ್ಗ, ಚಿಕ್ಕಬಾದವಾಡಗಿ ಭಕ್ತರಿಂದ ಗೆಜ್ಜೆಯ ಕೋಲು, ಹಿರೇಯರನಕೇರಿ ಭಕ್ತರಿಂದ ಬಾಳೆ ಕಂಬ-ತೆಂಗಿನ ಗರಿ, ಹೊನ್ನರಹಳ್ಳಿ ಭಕ್ತರಿಂದ ತೇರಿಗೆ ಹೂವಿನ ಅಲಂಕಾರದೊಂದಿಗೆ ಸಂಜೆ 6 ಗಂಟೆಗೆ ವೀರಭದ್ರೇಶ್ವರ ರಥೋತ್ಸವ ಜರುಗುವುದು.

ಅಮೀನಗಡ- ಯರಿಗೋನಾಳದ ಶಂಕರರಾಜೇಂದ್ರ ಸ್ವಾಮೀಜಿ, ಹಡಗಲಿ ನಿಡಗುಂದಿಯ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಪುರತಗೇರಿ ಕೈಲಾಸಲಿಂಗ ಶಿವಾಚಾರ್ಯ ಸ್ವಾಮೀಜಿ, ಹುನಗುಂದ ಗಚ್ಚಿನಮಠದ ಅಮರೇಶ್ವರ ದೇವರು ಸಾನ್ನಿಧ್ಯ ವಹಿಸುವರು. ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಪಿ.ನಾಡಗೌಡ ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಶಿಕ್ಷಕ ಮಡಿವಾಳಪ್ಪ ವಾಲಿಕಾರ ಅತಿಥಿಯಾಗಿ ಪಾಲ್ಗೊಳ್ಳುವರು.

ಸಂಜೆ 7 ಗಂಟೆಗೆ ವೀರಭದ್ರೇಶ್ವರ ಪುರಾಣ ಮಹಾಮಂಗಲ ಕಾರ್ಯಕ್ರಮ ಜರುಗುವುದು. ಮಧ್ಯಾಹ್ನ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net