

ಗೊಳಸಂಗಿ: ಸಮೀಪದ ಮಸೂತಿ ಗ್ರಾಮದ ವೀರಭದ್ರೇಶ್ವರ ಮತ್ತು ಗ್ರಾಮದೇವತೆಯ ಜಾತ್ರಾ ಮಹೋತ್ಸವ ಏ.7 ರಿಂದ 13 ರವರೆಗೆ ಜರುಗಲಿದೆ.
ಏ.7 ರಂದು ಸಂಜೆ 5 ಗಂಟೆಗೆ ಬೆಳ್ಳಿ ನಂದಿಕೋಲನ್ನು ಸಕಲ ವಾದ್ಯಮೇಳದೊಂದಿಗೆ ದೇವಸ್ಥಾನಕ್ಕೆ ಬರಮಾಡಿಕೊಳ್ಳುವುದು, ವೀರಭದ್ರೇಶ್ವರ ಪಲ್ಲಕ್ಕಿಯನ್ನು ಗಂಗಾ ಸ್ನಾನಕ್ಕಾಗಿ ಕೃಷ್ಣಾ ನದಿ ತೀರಕ್ಕೆ ಬೀಳ್ಕೊಡುವುದು, ಕಳೆದ ಮಾ.28 ರಿಂದ ಆರಂಭಗೊಂಡಿದ್ದ ಆಧ್ಯಾತ್ಮಿಕ ಪ್ರವಚನ ರಾತ್ರಿ 9 ಗಂಟೆಗೆ ಸಮಾಪ್ತಿಗೊಳ್ಳುವುದು.
8 ರಂದು ಸಂಜೆ 4 ಗಂಟೆಗೆ ಗ್ರಾಮದೇವತೆಗೆ ಭಕ್ತರಿಂದ ನೀರು ಬಿಡುವುದು, 7 ಗಂಟೆಗೆ ಸುಮಂಗಲೆಯರಿಂದ ದೇವಿಗೆ ಉಡಿ ತುಂಬುವುದು, ನಂತರ ಪಾದಗಟ್ಟಿಯಿಂದ ದೇವಸ್ಥಾನದವರೆಗೆ ಗ್ರಾಮದೇವತೆಯ ಮೆರವಣಿಗೆ, ರಾತ್ರಿ 10 ಗಂಟೆಗೆ ವೀರಭದ್ರೇಶ್ವರ ಪಲ್ಲಕ್ಕಿಯನ್ನು ಉತ್ಸವದೊಂದಿಗೆ ದೇವಸ್ಥಾನಕ್ಕೆ ಬರಮಾಡಿಕೊಳ್ಳುವುದು.
9 ರಂದು ಬೆಳಗ್ಗೆ 9 ಗಂಟೆಗೆ ಭಕ್ತರ ಅಗ್ನಿಪ್ರವೇಶಕ್ಕಾಗಿ ರೈತರಿಂದ ಕಟ್ಟಿಗೆ ಸಂಗ್ರಹ. 10 ರಂದು ಮಧ್ಯಾಹ್ನ 1 ಗಂಟೆಗೆ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ, ಭಕ್ತರಿಂದ ಅಗ್ನಿಪ್ರವೇಶ, ನಂತರ ಅನ್ನ ಸಂತರ್ಪಣೆ ಇರುವುದು, ರಾತ್ರಿ 10 ಗಂಟೆಗೆ ಸ್ಥಳಿಯ ವೀರಭದ್ರೇಶ್ವರ ನಾಟ್ಯ ಸಂದಿಂದ "ನನಗೆ ತಾಯಿ ಯಾರು?' ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
11 ರಂದು ಸಂಜೆ 6 ಗಂಟೆಗೆ ಮರು ಅಗ್ನಿಪ್ರವೇಶ, ರಾತ್ರಿ 10 ಗಂಟೆಗೆ ಗೋಕಾಕದ ಆನಂದಕಂದ ನಾಟ್ಯ ಕಲಾ ಬಳಗದಿಂದ "ಹಣೆಬರಹದ ಹೊತ್ತು ಯಾರಿಗೆ ಗೊತ್ತು? ' ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. 13 ರಂದು ಸಂಜೆ 4 ಗಂಟೆಗೆ ಮುತೆದೆಯರಿಗೆ ಉಡಿ ತುಂಬುವುದು, ಮಹಾಪ್ರಸಾದದೊಂದಿಗೆ ಜಾತ್ರಾ ಕಾರ್ಯಕ್ರಮ ಮಂಗಲಗೊಳ್ಳುವುದು ಎಂದು ಜಾತ್ರಾ ಸಮಿತಿ ಪ್ರಕಟಣೆ ತಿಳಿಸಿದೆ.