

ಬೆಳವಣಿಕಿ(ತಾ.ರೋಣ): ಸಮೀಪದ ಯಾವಗಲ್ಲ ಗ್ರಾಮದಲ್ಲಿ ಸೆ. 1ರಂದು ಸಂಜೆ 5 ಗಂಟೆಗೆ ವೀರಭದ್ರೇಶ್ವರ ಹಾಗೂ ಬಸವೇಶ್ವರರ ಜೋಡಿ ರಥೋತ್ಸವ ನಡೆಯಲಿದೆ. ಬೆಳಗ್ಗೆ ಶ್ರೀ ವೀರಭದ್ರೇಶ್ವರ ಸ್ವಾಮಿ ಹಾಗೂ ಬಸವೇಶ್ವರ ಮೂರ್ತಿಗೆ ಅಲಂಕಾರ, ರುದ್ರಾಭಿಷೇಕ ನೆರವೇರಲಿದೆ.
ಹಿನ್ನೆಲೆ: ರಾಜ್ಯದಲ್ಲೆ ಅಪರೂಪದ ಜೋಡು ರಥೋತ್ಸವ ಯಾವಗಲ್ಲ ಗ್ರಾಮದಲ್ಲಿ ಏಕಕಾಲಕ್ಕೆ ನಡೆಯಲಿವೆ. ಉತ್ತರ ಕರ್ನಾಟಕದಲ್ಲಿ ತನ್ನದೇ ಆದ ವಿಶೇಷತೆ ಪಡೆದ ಈ ಶ್ರೀ ವೀರಭದ್ರೇಶ್ವರ ಸ್ವಾಮಿ ಹಾಗೂ ಬಸವೇಶ್ವರರ ರಥೋತ್ಸವವು ಅನ್ನ ತಮ್ಮಂದಿರ ರಥೋತ್ಸವವೆಂದೇ ಪ್ರತೀತಿ ಪಡೆದಿದೆ. ಹಲವು ಶತಮಾನಗಳ ಇತಿಹಾಸ ಹೊಂದಿರುವ ಈ ಎರಡು ದೇವಸ್ಥಾನಗಳು ಭಕ್ತರ ಇಷ್ಟಾರ್ಥ, ಮನೋಭಿಲಾಷೆ ಈಡೇರಿಸುವ ಆರಾಧ್ಯದೇವರಾಗಿದ್ದಾರೆ.
ಗಡ್ಡಿ ತೇರಿನ ವಿಶೇಷ:
ಶ್ರೀ ವೀರಭದ್ರೇಶ್ವರ ಸ್ವಾಮಿಯ ತೇರು 37 ಅಡಿ ಎತ್ತರವಾಗಿದ್ದು, ಈ ಭಾಗದಲ್ಲಿ ಅತೀ ಎತ್ತರದ ತೇರು ಎನಿಸಿಕೊಂಡಿದೆ. ಬಸವಣ್ಣ ದೇವರ ತೇರು 29 ಅಡಿ ಎತ್ತರವಾಗಿದ್ದು, ಸುಮಾರು 25 ಲಕ್ಷ ರೂಪಾಯಿಗಳ ಸಾಗವಾನಿ ಹಾಗೂ ನಂದಿ ಮರದ ಕಟ್ಟಿಗೆಗಳಿಂದ ನಿರ್ವಿುಸಲಾಗಿದೆ. ಆಧುನಿಕ ಸ್ಪರ್ಷ ನೀಡುವ ನಿಟ್ಟಿನಲ್ಲಿ 40 ಕ್ಚಿಂಟಾಲ್ ಕಬ್ಬಿಣ ಬಳಸಲಾಗಿದೆ. ಇದರಿಮದ ಇಕ್ಕಟ್ಟಾದ ಜಾಗದಲ್ಲಿ ಈ ಗಡ್ಡಿ ತೇರುಗಳು ನಿರಂತರವಾಗಿ ಚಲಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪಂಚಮರಗಳಾದ ಶ್ರೀಗಂಧ, ಹೊನ್ನಿ, ಸಾಗವಾನಿ, ನಂದಿ, ಮತ್ತಿ ಕಟ್ಟಿಗೆಗಳನ್ನು ಈ ತೇರು ನಿರ್ವಣಕ್ಕೆ ಬಳಸಲಾಗಿದೆ. ಪಾರ್ವತಿ ಪರಮೇಶ್ವರ, ವೀರಭದ್ರೇಶ್ವರ, ಸರಸ್ವತಿ, ವಿಘ್ನೇಶ್ವರ, ಪಂ. ಪುಟ್ಟರಾಜ ಗವಾಯಿಗಳು, ಸಿದ್ಧಾರೂಢರು, ವಾಲ್ಮೀಕಿ, ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭುದೇವರು ಸೇರಿ ಮುನಿಗಳು, ದೇವಾನು ದೇವತೆಗಳನ್ನು ಚಿತ್ರಿಸಲಾಗಿದೆ. ವೇದಗಳ ನಾಮ, ಉಪನಾಮ, ಆಕರ್ಷಕ ಸಿಂಹಗಳ ಚಿತ್ರಗಳನ್ನು ಕೆತ್ತಲಾಗಿದೆ. ರಥ ಶಿಲ್ಪಿ ಗಂಗಾಪೂರ ಗ್ರಾಮದ ಎಚ್ಚರಪ್ಪ ಬಡಿಗೇರ ರಥ ನಿರ್ವಿುಸಿದ್ದಾರೆ ಎಂದು ದೇವಸ್ಥಾನದ ಜಾತ್ರಾ ಸೇವಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.