

ಶಿಕಾರಿಪುರ: ದಕ್ಷಯಜ್ಞ ಸಂಹಾರಕನಾದ ಶ್ರೀ ವೀರಭದ್ರಸ್ವಾಮಿ ಕಲಿಯುಗದ ಕಾಮಧೇನುವಾಗಿ ಭಕ್ತರನ್ನು ಪೊರೆಯುತ್ತಿದ್ದಾನೆ. ಶ್ರೀ ವೀರಭದ್ರೇಶ್ವರ ಸ್ವಾಮಿಯ ಆರಾಧನೆಯಿಂದ ಮಳೆ, ಬೆಳೆ ಸಮೃದ್ಧವಾಗಿ ನಾಡು ಸುಭಿಕ್ಷವಾಗುತ್ತದೆ ಎಂದು ಕಡೇನಂದಿಹಳ್ಳಿಯ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಗುರುವಾರ ನಗರದಲ್ಲಿ ಶ್ರೀ ವೀರಭದ್ರ ಸೇವಾ ಸಮಿತಿ ಮತ್ತು ಅಖಿಲ ಭಾರತ ವೀರಶೈವ ಮಹಿಳಾ ಘಟಕ ಆಯೋಜಿಸಿದ್ದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯುತ್ಸವದಲ್ಲಿ ಆಶೀರ್ವಚನ ನೀಡಿದ ಶ್ರಿಗಳು, ದೈವ ಕಾರ್ಯಗಳನ್ನು ಮಾಡುವ ಮೂಲಕ ನಮ್ಮ ಹಿರಿಯರು ಸಮಾಜಕ್ಕೆ ಸದ್ವಿಚಾರಗಳ ಸಂದೇಶ ನೀಡಿದ್ದರು. ಭಗವಂತನ ಇರುವಿಕೆಯ ಅನುಭವ ನಮಗೆ ಸದಾ ಆಗುತ್ತಿರುತ್ತದೆ. ಅವನು ಸರ್ವವ್ಯಾಪಿ. ಪ್ರತ್ಯಕ್ಷವಾಗಿ ಕಾಣದಿದ್ದರೂ ಪರೋಕ್ಷವಾಗಿ ನಾವು ಅವನನ್ನು ಕಾಣಬಹುದು ಎಂದರು.
ಶಿವಸುತ ಶ್ರೀ ವೀರಭದ್ರ ದೇವರ ಸಾಕ್ಷಿರೂಪ ಗುಗ್ಗುಳ. ಇಲ್ಲಿ ಪುರವಂತರಿಂದ ವಿಶೇಷವಾದ ಶರಭಿ ಗುಗ್ಗುಳ ನಡೆಯುತ್ತಿದೆ. ಗುಗ್ಗುಳದ ಜ್ಯೋತಿಯಲ್ಲಿ ಶ್ರೀ ವೀರಭದ್ರ ಸ್ವಾಮಿ ಇರುತ್ತಾನೆ. ಆ ಜ್ಯೋತಿಯ ದರ್ಶನ ಮಾತ್ರದಿಂದಲೇ ಭಕ್ತರ ಜನ್ಮ ಜನ್ಮಾಂತರದ ಪಾಪ ಶೇಷಗಳು ನಾಶವಾಗಿ ಪುನೀತರಾಗುತ್ತಾರೆ. ಪಟ್ಟಣದ ಪ್ರತಿ ಬೀದಿ ಬೀದಿಯಲ್ಲಿಯೂ ಗುಗ್ಗುಳ ಸಾಗಿದಾಗ ರೋಗ-ರುಜಿನಗಳು ನಾಶವಾಗುತ್ತವೆ ಎಂದು ಹೇಳಿದರು.
ವೀರಶೈವ ಸಮಾಜದಲ್ಲಿ ಗುಗ್ಗುಳ ವಿಶೇಷವಾದಂತಹ ಮಹತ್ವವಿದೆ. ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಗುಗ್ಗುಳದಿಂದ ಸುಖ, ಸಮೃದ್ಧಿ, ನೆಮ್ಮದಿ ಮತ್ತು ಆರೋಗ್ಯ ಭಕ್ತರಿಗೆ ದೊರೆಯುವಂತಾಗಲಿ. ಯಾವುದೇ ರೀತಿಯ ಜಾತಿ-ಮತ ಭೇದವಿಲ್ಲದೇ ಎಲ್ಲಾ ಸಮುದಾಯಗಳಲ್ಲಿಯೂ ಶ್ರೀ ವೀರಭದ್ರ ಸ್ವಾಮಿಯ ಭಕ್ತರಿದ್ದಾರೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭೆಯ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಕಾಂಚನಾ ಕುಮಾರ್, ಜಿಲ್ಲಾ ವೀರಶೈವ ಸಮಾಜದ ನಿರ್ದೇಶಕ ಕುಮಾರಸ್ವಾಮಿ ಹಿರೇಮಠ, ಬಿ.ಎಂ.ಚನ್ನರಾಯ ಹರೀಶ್, ಟಂಕಲಕೋಟೆ ಜಗದೀಶ್, ಸಂಜು ಗೌಳಿ, ಶಿವಕುಮಾರ್, ಆಟೋ ಚಂದ್ರು, ಅಂಬರಗೊಪ್ಪ ಯುವರಾಜ್, ನಂದೀಶ್ ಶಾಸ್ತ್ರಿ, ಪ್ರಸಾದ್ ಶಾಸ್ತ್ರಿ, ಕೊಟ್ರೆ ಶಾಸ್ತ್ರಿ, ಗಜೇಂದ್ರಣ್ಣ, ನೇತ್ರಾವತಿ, ಸುಧಾ ರವಿಕುಮಾರ್, ಹೇಮಾವತಿ, ಲತಾ ಮಂಜುನಾಥ್ ಇತರರಿದ್ದರು
ಅದ್ದೂರಿ ಮೆರವಣಿಗೆ
ಪುರಸಭೆ ಮುಂಭಾಗದಲ್ಲಿರುವ ದೇವಸ್ಥಾನದಲ್ಲಿ ಶ್ರೀ ವೀರಭದ್ರೇಶ್ವ ಸ್ವಾಮಿ ಮೂರ್ತಿಗೆ ಬ್ರಾಹ್ಮೀ ಮುಹೂರ್ತದಲ್ಲಿ ಮಹಾರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜೆಗಳು ನೆರವೇರಿದವು. ಬಳಿಕ ಶ್ರೀ ವೀರಭದ್ರೇಶ್ವರ ಸ್ವಾಮಿಯ ಬೆಳ್ಳಿ ಮೂರ್ತಿಯ ಮೆರವಣಿಗೆಯೂ ವಿಶಿಷ್ಟ ವಾದ ಶರಭಿ ಗುಗ್ಗುಳದೊಂದಿಗೆ 12 ಪುರವಂತರು ಮತ್ತು ಮೇಳದೊಂದಿಗೆ ಪುರಸಭೆ ಮುಂಭಾಗದಿಂದ ಹೊರಟು ತಾಲೂಕು ಕಚೇರಿ, ಮುದಿಗೌಡರ ರಸ್ತೆ, ಹಳೆ ಹೊನ್ನಾಳಿ ರಸ್ತೆ, ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನ, ತೇರುಬೀದಿ, ಹಳೆ ಆಸ್ಪತ್ರೆ ರಸ್ತೆ, ಎಂ.ಎಸ್.ರಸ್ತೆ, ಮಂಡಿಪೇಟೆ, ದೊಡ್ಡಪೇಟೆ ಮಾರ್ಗವಾಗಿ ಸಾಗಿ ಜಗದ್ಗುರು ಶ್ರೀ ರೇಣುಕಾಚಾರ್ಯ ಮಂದಿರದಲ್ಲಿ ಸಂಪನ್ನಗೊಂಡಿತು. ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.