

ಹುಬ್ಬಳ್ಳಿ : ನವನಗರ ವೀರಶೈವ ಸಮಾಜ ಸಂಘಟನಾ ಸಮಿತಿ ಆಶ್ರಯದಲ್ಲಿ ಮೇ 12 ರಂದು ಜರುಗಲಿರುವ ಶ್ರೀ ವೀರಭದ್ರಸ್ವಾಮಿ ದೇವಾಲಯದ 15ನೆಯ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಜಗದ್ಗುರು ಪಂಚಾಚಾರ್ಯರ ಜಯಂತಿ ಯುಗಮಾನೋತ್ಸವ, ಅಖಿಲ ಭಾರತ ವೀರಶೈವ ಮಹಾಸಭೆಯ ಸಂಸ್ಥಾಪಕರಾದ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳ ಜಯಂತಿ ಸೇರಿದಂತೆ ಮೇ 8 ರಿಂದ 12ರವರೆಗೆ 5 ದಿನಗಳ ಕಾಲ ವಿವಿಧ ಧಾರ್ವಿುಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮೇ 8 ರಂದು ಷಟ್ಸ್ಥಲ ಧ್ವಜಾರೋಹಣ ಮತ್ತು ರಥದ ಪೂಜೆ, 9 ರಂದು ಸಂಜೆ 6 ಗಂಟೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸುವರು.
ಲೇಖಕ ಗುರುಮೂರ್ತಿ ಯರಗಂಬಳಿಮಠ, ಉಪನ್ಯಾಸಕ ಪ್ರಕಾಶ ಸುಣಗಾರ ಅತಿಥಿಗಳಾಗಿ ಪಾಲ್ಗೊಳ್ಳುವರು. 10 ರಂದು ಸಂಜೆ 6 ಗಂಟೆಗೆ ನಡೆಯಲಿರುವ ಶ್ರೀ ಹಾನಗಲ್ಲ ಕುಮಾರ ಸ್ವಾಮೀಜಿ ಜಯಂತಿಯನ್ನು ಚಿಕ್ಕೇನಕೊಪ್ಪದ ಶ್ರೀ ಚೆನ್ನವೀರಶರಣರ ಆಶ್ರಮದ ಶ್ರೀ ಶಿವಶಾಂತವೀರ ಶರಣರು ಉದ್ಘಾಟಿಸುವರು. ಕೀರ್ತನ ಕಲಾವಿದ ಎಂ. ಕಲ್ಲೀನಾಥಶಾಸ್ತ್ರೀ ಅಡ್ನೂರ, ಜನಪದ ಕಲಾವಿದ ಡಾ. ರಾಮೂ ಮೂಲಗಿ ಭಾಗವಹಿಸುವರು.
11 ರಂದು ಸಂಜೆ 6 ಗಂಟೆಗೆ ಜರುಗಲಿರುವ ಧರ್ಮ ಚಿಂತನ ಗೋಷ್ಠಿಯನ್ನು ಸಂಶಿ ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ ಉದ್ಘಾಟಿಸುವರು. ಕೆ.ಎಲ್.ಇ. ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ ಅತಿಥಿಯಾಗಿದ್ದು, ಯೋಗ ತಜ್ಞ ಕುಮಾರಸ್ವಾಮಿ ಹಿರೇಮಠ ಪಾಲ್ಗೊಳ್ಳುವರು. ವೀರಶೈವ ಸಮಾಜ ಸಂಘಟನಾ ಸಮಿತಿ ಅಧ್ಯಕ್ಷ ಅನಿಲಕುಮಾರ ಉಳ್ಳಾಗಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
12 ರಂದು ಸಂಜೆ 5 ಗಂಟೆಗೆ ನಡೆಯುವ ಶ್ರೀ ವೀರಭದ್ರಸ್ವಾಮಿಯ ವಾರ್ಷಿಕ ರಥೋತ್ಸವವನ್ನು ನವನಗರ ಕಾಶಿ ಶಾಖಾಮಠದ ಶ್ರೀ ರಾಜಶೇಖರ ಶಿವಾಚಾರ್ಯ ಸಾಮೀಜಿ ಉದ್ಘಾಟಿಸುವರು. ಆಗಿ ಹುಣ್ಣಿಮೆಯ ದಿನ ಪ್ರಾತಃಕಾಲ ಶ್ರೀ ವೀರಭದ್ರಸ್ವಾಮಿಗೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆಯ ವಿಶೇಷ ಪೂಜೆಯ ನಂತರ ಪಲ್ಲಕ್ಕಿ ಉತ್ಸವ ನವನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. 11 ರಂದು ಪ್ರಾತಃಕಾಲದಲ್ಲಿ ಜಂಗಮ ವಟುಗಳ ಅಯ್ಯಾಚಾರ ಹಾಗೂ ಭಕ್ತಗಣಕ್ಕೆ ಇಷ್ಟಲಿಂಗ ದೀಕ್ಷೆ ನಡೆಯಲಿದೆ ಎಂದು ಸಮಿತಿ ಉಪಾಧ್ಯಕ್ಷ ಅಶೋಕ ಬಾಳಿಕಾಯಿ ತಿಳಿಸಿದ್ದಾರೆ.