

ಹೊಳೆಆಲೂರ: ವೀರಶೈವ ಧರ್ಮದ ಮೂಲಪುರುಷ ಶಿವ ಅಥವಾ ಶಿವ ತತ್ವಕ್ಕೆ ಜಗತ್ತಿನಲ್ಲಿ ಅಪಚಾರ ಕಂಡು ಬಂದರೆ, ಮಾತೆಯ ಸ್ವರೂಪವಾಗಿರುವ ಆದಿಶಕ್ತಿ ಪಾರ್ವತಿಗೆ ಅವಮಾನವಾಗುವ ಸಂದರ್ಭ ಸೃಷ್ಟಿಯಾದರೆ, ಧರ್ಮ ರಕ್ಷಣೆಗಾಗಿ ಖಂಡಿತವಾಗಿ ಸಾಕ್ಷಾತ್ ಶಿವನ ಸ್ವರೂಪವಾಗಿರುವ ಶ್ರೀ ವೀರಭದ್ರಸ್ವಾಮಿಯ ಅವತಾರವಾಗುತ್ತದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ಗ್ರಾಮದ ಶಿವಪಾರ್ವತಿ ಮಾಂಗಲ್ಯ ಮಂದಿರ ಆವರಣದಲ್ಲಿ ನೂತನವಾಗಿ ನಿರ್ವಣವಾಗಿರುವ ಭದ್ರಕಾಳಿ ಸಮೇತ ವೀರಭದ್ರಸ್ವಾಮಿ, ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಲೋಕಾರ್ಪಣೆ ಹಾಗೂ ಪ್ರಾಣ ಪ್ರತಿಷ್ಠಾಪನೆ ನಂತರ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ವೀರಶೈವ ಧರ್ಮಕ್ಕೆ ಭವ್ಯ ಪರಂಪರೆಯೊಂದಿಗೆ ತನ್ನದೆ ಆದ ಆಚಾರ, ವಿಚಾರಗಳಿವೆ. ಸಿದ್ಧಾಂತ ಶಿಖಾಮಣಿಯ ಪ್ರಕಾರ ಲಿಂಗಾಚಾರ, ಶಿವಾಚಾರ, ಸದಾಚಾರ, ಗಣಾಚಾರ, ಮೃತ್ಯಾಚಾರದ ಐದು ಪದ್ಧತಿಯ ಪ್ರಕಾರ ನಮ್ಮ ಜೀವನ ಮಾರ್ಗವಾಗಿದೆ ಎಂದರು.
ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಧರ್ಮ, ದೇವಸ್ಥಾನಗಳ ನಿರ್ಮಾಣ ಮಾತ್ರ ನಮ್ಮ ಕೆಲಸವಲ್ಲ. ಪವಿತ್ರವಾದ ವೀರಶೈವ ಧರ್ಮದ ತತ್ವಗಳ ಪಾಲನೆ, ಪೋಷಣೆ, ಆಚರಣೆ, ಅನುಷ್ಠಾನಕ್ಕೆ ಭದ್ರತೆಯಿಂದ ನಡೆದುಕೊಳ್ಳಬೇಕು. ರಾಜಕೀಯ, ಸಾಮಾಜಿಕ, ಆರ್ಥಿಕ ಇನ್ನಿತರ ಚಟುವಟಿಕೆಗಿಂತ ಧರ್ಮವೇ ನಮ್ಮ ದೇಶಕ್ಕೆ ಆತ್ಮವಿದ್ದಂತೆ. ಇತಿಹಾಸ ಅವಲೋಕಿಸಿ ನೋಡಿದಾಗ ನಮ್ಮ ವೈವಿಧ್ಯತೆಯ ಪರಂಪರೆ ಮೇಲೆ ಪರಕೀಯ ದಾಳಿ ಜರುಗಿದ್ದರೂ, ಜನಸಾಮಾನ್ಯರ ಉಸಿರಾಗಿರುವ ಧರ್ಮವನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ. ಪ್ರಯಾಗರಾಜ್ದಲ್ಲಿ ಸಮರೋಪಾದಿಯಲ್ಲಿ ಸಂಗಮವಾಗಿರುವ ಹಿಂದು ಶಕ್ತಿಯನ್ನು ಕಂಡು ಜಗತ್ತು ಬೆರಗಾಗಿದೆ. ಮುಂಬರುವ ದಿನಗಳಲ್ಲಿ ಭಾರತ ಜಗತ್ತಿಗೆ ಗುರುವಾಗಿ ಮಾರ್ಗದರ್ಶನ ಮಾಡುವ ಕಾಲ ದೂರವಿಲ್ಲ ಎಂದರು.
ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ಮಂಗಳವಾರ 1008 ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಸೇವಾಲಾಲ ನಗರದ ಮಾರುತಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಆಲೂರು ವೆಂಕಟರಾವ್ ವೃತ್ತ, ಬಸವನಗರ, ಗಾಂಧಿ ನಗರ, ದುರ್ಗಾದೇವಿ ಕಾಲನಿ, ಶ್ರೀ ಯಚ್ಚರೇಶ್ವರ ಮಠ, ದುರ್ಗದ ಬೈಲ್, ಮುಖ್ಯ ಬಜಾರ, ಎಪಿಎಂಸಿ ಮೂಲಕ ಸಾಗಿ ವೀರಭದ್ರೇಶ್ವರ ದೇವಸ್ಥಾನ ತಲುಪಿತು. ಮೆರವಣಿಗೆಯಲ್ಲಿ 1008 ಸುಮಯರ ಕುಂಭ, ಕಲ್ಮೇಶ್ವರ ಭಜನಾ ತಂಡ ಸೇರಿದಂತೆ ಡೊಳ್ಳು, ಕರಡಿ ಮಜಲು, ಪುರವಂತರ ಒಡಪು, ನಾಡಿನ ವಿವಿಧ ಭಾಗದಿಂದ ಆಗಮಿಸಿದ ಕಲಾತಂಡಗಳ ಹೆಜ್ಜೆ ಕುಣಿತ, ಹೆಗಲ ಮೇಲೆ ಕಾವಿ ವಸ್ತ್ರಸಹಿತ ಶ್ವೇತ ವಸ್ತ್ರ ಧಾರಣೆಯ ಭಕ್ತಿಭಾವದ ಭಕ್ತ ಸಮೂಹ, ರಸ್ತೆಯ ತುಂಬ ಚಿತ್ತಾರದ ರಂಗೋಲಿ, ಕೆಸರಿಯ ತಳಿರು-ತೋರಣ, ಶಾಸ್ತ್ರೋಕ್ತ ಪ್ರಾಣ ಪ್ರತಿಷ್ಠಾಪನೆ, ಹೋಮ ಹವನ ನೋಡಿದಾಗ ಉತ್ತರ ಭಾರದ ಕುಂಭಮೇಳದಲ್ಲಿ ಭಾಗವಹಿಸಿದ ಖುಷಿಯಲ್ಲಿ ಜನರು ಭಾವಪರವಶವಾದರು.
ಹುಣಸಘಟ್ಟ ಹಾಲೇಶ್ವರ ಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು, ಮುಕ್ತಿ ಮಂದಿರದ ವಿಮಲ ರೇಣುಕಾಚಾರ್ಯ ಸ್ವಾಮಿಗಳು, ಬೆನಹಾಳದ ಸದಾಶಿವ ಮಹಾಂತ ಶಿವಾಚಾರ್ಯರು, ಹೊಳೆಆಲೂರ ಯಚ್ಚರೇಶ್ವರ ಸ್ವಾಮಿಗಳು, ಅಸೂಟಿಯ ರೇವಣಸಿದ್ಧೇಶ್ವರ ಸ್ವಾಮಿಗಳು, ಮುಚಖಂಡಿಯ ಪ್ರಭುಸ್ವಾಮಿ ಸರಗಣಾಚಾರಿ, ಗುಳೇದಗುಡ್ಡದ ಅಭಿನವ ಒಪ್ಪತ್ತೇಶ್ವರ ಸ್ವಾಮಿಗಳು, ಪುರ್ತಗೇರಿಯ ಕೈಲಾಸಲಿಂಗಸ್ವಾಮಿಗಳು, ಕೆರೂರಿನ, ರೋಣ ಬೂದೀಶ್ವರ ಮಠದ ಡಾ.ವಿಶ್ವನಾಥ ಸ್ವಾಮಿಗಳು, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಚಂದ್ರಕಾಂತಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಲ್ಮೇಶ್ವರ ಸಾಸಳ್ಳಿ, ಮಲ್ಲು ಕಂಠಿ, ಡಾ.ಅನಿಲ ಬೀಮನಗೌಡ, ಶಿವಪ್ಪ ಯಾವಗಲ್ಲ, ಪಾಂಡುರಂಗ ಪತ್ತಾರ, ಮಹೇಂದ್ರಗೌಡ ಪಾಟೀಲ, ಶ್ರೀಶೈಲ ಬದಾಮಿ, ಮುತ್ತಣ್ಣ ಮುದಕವಿ, ಶ್ರೀಧರ ರಮಣಿ, ಸುರೇಶ ಗಾಣಿಗೇರ, ಶಶಿಧರ ಹಿರೇಮಠ, ಇತರರು ಉಪಸ್ಥಿತರಿದ್ದರು.