ವಿದೇಶಿಗರ ವಿರುದ್ಧ ಹೋರಾಡಿದ ವೀರನಾರಿ ಅಬ್ಬಕ್ಕ: ಎಬಿವಿಪಿ ಮುಖಂಡ ಶಂಭುಲಿಂಗೇಗೌಡ ಬಣ್ಣನೆ

Veera Rani Abbakka Jayanti Mandya
Published on

ಮಂಡ್ಯ: ಸ್ವದೇಶಿ ವಸ್ತುಗಳನ್ನೇ ಉಪಯೋಗಿಸುವಂತೆ ಕರೆ ನೀಡುರುವುದರ ಜತೆಗೆ ಕಪ್ಪ ಕಾಣಿಕೆ ಕೊಡಲು ನಿರಾಕರಿಸಿದ ಅಬ್ಬಕ್ಕ ರಾಣಿ ವಿದೇಶಿಯರ ವಿರುದ್ಧ ಹೋರಾಟ ನಡೆಸಿದ ವೀರನಾರಿ ಎಂದು ಎಬಿವಿಪಿ ಮುಖಂಡ ಶಂಭುಲಿಂಗೇಗೌಡ ತಿಳಿಸಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ವಿಭಾಗದ ವತಿಯಿಂದ ವೀರ ರಾಣಿ ಅಬ್ಬಕ್ಕರವರ 500ನೇ ಜಯಂತಿ ಅಂಗವಾಗಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿ(ಕಲ್ಲುಕಟ್ಟಡ)ನಲ್ಲಿ ಅಬ್ಬಕ್ಕನವರ ರಥಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಜನ್ಮ ಭೂಮಿಯನ್ನು ಪರಕೀಯರಿಂದ ರಕ್ಷಿಸಿಕೊಳ್ಳಲು ಹೋರಾಟ ಮಾಡಿದ ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ಲಕ್ಷ್ಮೀಬಾಯಿ, ಒನಕೆ ಓಬವ್ವರಂತಹ ವೀರ ನಾರಿಯರಲ್ಲಿ ಅಬ್ಬಕ್ಕ ಸಹ ಒಬ್ಬರಾಗಿದ್ದಾರೆ ಎಂಬುದನ್ನು ಇಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ರಾಜ್ಯಾದ್ಯಂತ ಅಬ್ಬಕ್ಕ ರಥಯಾತ್ರೆ ನಡೆಸಲಾಗುತ್ತಿದೆ ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಾ ಸಂಘವು ರಾಜಕೀಯೇತರ ಸಂಸ್ಥೆ. ಭಾರತೀಯ ಶಿಕ್ಷಣ ಸಂಸ್ಥೆ, ಅರೋಗ್ಯವನ್ನು ಎಚ್ಚರಿಸುವ ಸಂಸ್ಥೆ, ವಿಪತ್ತು ಪರಿಹಾರ ಸೇರಿದಂತೆ ನಾಡು ನುಡಿ ಜಲ ನೆಲ ಗಡಿಯ ರಕ್ಷಣೆ ಸೇರಿದಂತೆ ಸದಾ ಬದ್ದರಾಗಿರುವಂತೆ ಅರಿವು ಮೂಡಿಸುವ ಸಂಸ್ಥೆಯಾಗಿದೆ. ಬೌದ್ಧಿಕ, ಆರೋಗ್ಯಕರ, ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಧೃಡರಾಗಿರುವಂತೆ ಮಾಡುವುದು ಶಿಕ್ಷಣ ಮತ್ತು ಸಂಶೋಧನೆಗಳ ಮೂಲಕ ಭಾರತವನ್ನು ಸಜ್ಜುಗೊಳಿಸಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವಂತ ಸಿದ್ಧಪಡಿಸುವುದು ಇದರ ಉದ್ದೇಶವಾಗಿದೆ ಎಂದರು.

ಸಮಾಜವನ್ನು ತಿದ್ದುವಂತ ಕೆಲಸ ಎ.ಬಿ.ವಿ.ಪಿ ಮಾಡುತ್ತಿರುವುದು ಶ್ಲಾಘನೀಯ. ನಾವು ಒಳ್ಳೆಯ ಕೆಲಸ ಮಾಡುವ ಮೂಲಕ ಮಾತಾ ಪಿತೃಗಳು, ಸಮಾಜ, ದೇವರು, ರಾಷ್ಟ್ರದ ಋಣವನ್ನು ತೀರಿಸುವಂತಾಗಬೇಕು. ಯುವ ಜನತೆ ಯಾವುದೋ ಕಾರಣಕ್ಕೂ ಆತ್ಮಹತ್ಯೆಯಂತಹ ಮಹಾಪಾಪದ ಕೆಲಸಕ್ಕೆ ಹೋಗಬಾರದು. ಜೀವನದಲ್ಲಿ ಎಷ್ಟೇ ಕಷ್ಟ ನಷ್ಟಗಳು ಬಂದರೂ ಎದೆಗುಂದದೆ ಧೈರ್ಯದಿಂದ ಎದುರಿಸುವಂತಾಗಬೇಕು. ಪ್ರತಿಯೊಬ್ಬರು ರಾಣಿ ಅಬ್ಬಕರಂತೆ ಎದೆಗುಂದದೆ ರಾಷ್ಟ್ರಕ್ಕಾಗಿ ದುಡಿಯುವ ಮನಸ್ಸು ಮಾಡಬೇಕು ಎಂದು ಸಲಹೆ ನೀಡಿದರು.

ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ಗುರುರಾಜಪ್ರಭು, ವಿಭಾಗ ಮಹಿಳಾ ಸಂಘಟನಾ ಕಾರ್ಯದರ್ಶಿ ವಸಂತಾ, ಚೇತಕ್, ರಾಷ್ಟ್ರೀಯ ಸೇವಾ ಸಮಿತಿ ಬೌದ್ಧಿಕ್ ಪ್ರಮುಖ್ ಸ್ಮಿತಾ ಸತ್ಯಪ್ರಕಾಶ್, ಎಬಿವಿಪಿ ಕಾರ್ಯಕರ್ತರಾದ ವರದರಾಜು, ಶ್ರೀಧರ್ ಇತರರಿದ್ದರು. ನಗರದ ಮಹಿಳಾ ಸರ್ಕಾರಿ ಕಾಲೇಜು, ಮಾಂಡವ್ಯ ಕಾಲೇಜು ಸೇರಿದಂತೆ ವಿವಿಧೆಡೆ ರಥ ಸಂಚರಿಸಿತು. ನಂತರ ಮೈಸೂರಿಗೆ ಬೀಳ್ಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net