

ಮೈಸೂರು: ದೇಶದ ವಿರುದ್ಧ ಸಂಚು ರೂಪಿಸುವ ಕಾರ್ಯ ಸ್ವಾತಂತ್ರೃ ಪೂರ್ವದಿಂದ ಇಂದಿನವರೆಗೂ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಕಳವಳ ವ್ಯಕ್ತಪಡಿಸಿದರು.
ಸಾವರ್ಕರ್ ಪ್ರತಿಷ್ಠಾನ ಮೈಸೂರು ವತಿಯಿಂದ ನಗರದ ಕಲಾಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಭಾರತ ವಿರೋಧಿ ಚಿಂತನೆ ಇರುವ ರಾಷ್ಟ್ರಗಳು ಹಾಗೂ ವ್ಯಕ್ತಿಗಳು ಒಂದು ಸುಳ್ಳುನ್ನು ನೂರು ಬಾರಿ ಹೇಳಿ ಅದನ್ನು ಸತ್ಯ ಎಂದು ದೇಶದ ಜನರನ್ನು ನಂಬಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸ್ವಾತಂತ್ರೃ ಕಾಲಘಟ್ಟದಲ್ಲಿ ನೆಹರು ಗ್ರೇಟ್, ಸಾವರ್ಕರ್ ಬ್ರಿಟಿಷರ ಏಜೆಂಟ್’ ಎಂದು ಅಪಪ್ರಚಾರ ಮಾಡಿದರು. ಕೇವಲ ಸ್ವಾತಂತ್ರೃ ಕಾಲಘಟ್ಟದಲ್ಲಿ ಮಾತ್ರವಲ್ಲ ಇಂದಿಗೂ ಸಾವರ್ಕರ್ ವಿರುದ್ಧ ಅಪಪ್ರಚಾರ ನಿಂತಿಲ್ಲ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ‘ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಇಂದಿರಾಗಾಂಧಿ ಪ್ರಜಾಪ್ರಭುತ್ವ ಪರವಾದ ವ್ಯಕ್ತಿ, ನರೇಂದ್ರ ಮೋದಿ ಪ್ರಜಾಪ್ರಭುತ್ವ ವಿರೋಧಿ’ ಎಂದು ಬಿಂಬಿಸುವ ಕಾರ್ಯವೂ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬ್ರಿಟಿಷರ ಚಿಂತನೆಯನ್ನು ದೇಶದಲ್ಲಿ ಬಿತ್ತುವ ಕಾರ್ಯವನ್ನು ಮಾಜಿ ಪ್ರಧಾನಿ ನೆಹರು ವ್ಯವಸ್ಥಿತವಾಗಿ ಮಾಡಿದರು. ಇಂದಿಗೂ ವಿಶ್ವದಲ್ಲಿ ಭಾರತ ವಿರೋಧಿ ಚಿಂತನೆಗಳನ್ನು ಬಿತ್ತುವ ಕಾರ್ಯ ನಿಂತಿಲ್ಲ. ಜಾಗತಿಕ ಹಸಿವಿನ ಸೂಚ್ಯಾಂಕ ಅಮೆರಿಕದಲ್ಲಿ ಬಿಡುಗಡೆಯಾಗುತ್ತದೆ. ಈ ಸೂಚ್ಯಾಂಕದ ಪ್ರಕಾರ ಹಸಿವಿನಿಂದ ಬಳಲುತ್ತಿರುವ ಪಾಕಿಸ್ತಾನ, ನಮ್ಮಿಂದ ನೆರವು ಪಡೆಯುವ ಶ್ರೀಲಂಕಾ ನಮಗಿಂತ ಉತ್ತಮ ಸ್ಥಿತಿಯಲ್ಲಿ ಇದೆ. ಬಡತನ ಹಾಗೂ ಧಾರ್ಮಿಕ ಸ್ವಾತಂತ್ರೃ ಸೂಚ್ಯಾಂಕದಲ್ಲೂ ಕಡಿಮೆ ಅಂಕಗಳನ್ನು ಭಾರತಕ್ಕೆ ನೀಡಲಾಗಿದೆ. ಈ ತಪ್ಪು ವರದಿಯನ್ನು ಮುಂದಿಟ್ಟುಕೊಂಡು ವಿಶ್ವದಲ್ಲಿ ಭಾರತವನ್ನು ಟೀಕಿಸುವ ಕಾರ್ಯ ನಡೆಯುತ್ತಿದೆ. ಪ್ರಸ್ತುತ ಭಾರತ ಜಗತ್ತಿನ 5ನೇ ಶ್ರೀಮಂತ ರಾಷ್ಟ್ರ, ಮುಂದಿನ ಮೂರು ವರ್ಷದಲ್ಲಿ 3ನೇ ಸ್ಥಾನಕ್ಕೆ ಹೋಗುತ್ತೇವೆ. ಜಗತ್ತಿನಲ್ಲಿ ವೇಗದಲ್ಲಿ ಬೆಳೆಯುತ್ತಿರುವ ನಮ್ಮ ಜಿಡಿಪಿ ಭಾರತದ್ದಾಗಿದೆ ಎಂದರು.
ದೇಶದ ವಿರುದ್ಧ ಸಂಚು ರೂಪಿಸುವವರು ದೇಶವನ್ನು ವಿಭಜಿಸುವ ಹಂತಕ್ಕೂ ತಲಪಿದ್ದಾರೆ. ದೇಶವನ್ನು ದಕ್ಷಿಣ ಭಾರತ ಹಾಗೂ ಉತ್ತರ ಭಾರತ ಎಂದು ವಿಭಜಿಸುವ ಚಿಂತನೆ ಬಿತ್ತುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಭಾರತವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲದೆ ಇದ್ದರೆ ಕನಿಷ್ಠ ದಕ್ಷಿಣ ಭಾರತವನ್ನು ಕಸಿಯುವ ಎಂಬ ಆಲೋಚನೆಯನ್ನು ಭಾರತ ವಿರೋಧಿಗಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರ್ಬನ್ ನಕ್ಸಲರು ದೇಶದಲ್ಲಿ ಸಕ್ರಿಯವಾಗುತ್ತಿದ್ದಾರೆ. ದೇಶದ ಪ್ರಮುಖ ವಿಶ್ವ ವಿದ್ಯಾಲಯಗಳು, ಕಾಲೇಜುಗಳು ಹಾಗೂ ಖಾಸಗಿ ಕಂಪನಿಗಳ ನೌಕರರನ್ನು ತಮ್ಮ ಚಿಂತನೆಯ ಕಡೆಗೆ ಸೆಳೆಯುವ ಕಾರ್ಯವನ್ನು ಅರ್ಬನ್ ನಕ್ಸಲರು ಮಾಡುತ್ತಿದ್ದಾರೆ. ಅರ್ಬನ್ ಏರ್ಯಾದಲ್ಲಿ ನಮಗೆ ಸರಿಯಾದವರನ್ನು ಗುರುತಿಸಲು ಸಾಧ್ಯವಾಗದೆ ಇದ್ದರೆ ಅಲ್ಪಸಂಖ್ಯಾತರನ್ನು ಸಂಘಟನೆಯ ಕಡೆಗೆ ಸೆಳೆಯಿರಿ ಎಂಬ ಸಂದೇಶ ರವಾನೆಯಾಗಿದೆ. ಪ್ರಸ್ತುತ ದೇಶದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಅಲ್ಪಸಂಖ್ಯಾತರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದಕ್ಕೆ ಕಳೆದ ಒಂದೂವರೆ ದಶಕದಿಂದ ಅರ್ಬನ್ ನಕ್ಸಲರು ಹಾಗೂ ಅಲ್ಪಸಂಖ್ಯಾತರ ಜೋಡಿ ಏರ್ಪಟ್ಟಿರುವುದು ಕಾರಣ ಎಂದು ಆರೋಪಿಸಿದರು.
‘ಪಾಕ್ ಆಕ್ರಮಿತ ಕಾಶ್ಮೀರ ವಶಪಡಿಸಿಕೊಳ್ಳುವುದು ಕಷ್ಟದ ಕೆಲಸ, ಪಾಕಿಸ್ತಾನದವರು ಏನು ಬಳೆ ತೊಟ್ಟುಕೊಂಡಿಲ್ಲ’ ಎಂದು ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿದ ನರೇಂದ್ರ ಮೋದಿ ‘ಪಾಕಿಸ್ತಾನ ಬಳೆ ತೊಡದೆ ಇದ್ದರೆ ತೊಡಿಸುತ್ತೇವೆ’ ಎಂದು ತಿರುಗೇಟು ನೀಡಿದ್ದರು. ಆದರೆ, ಮೋದಿ ಹೇಳಿಕೆಗೆ ಪಾಕಿಸ್ತಾನ ಪ್ರತಿಕ್ರಿಯೆ ನೀಡುವ ಧೈರ್ಯ ಮಾಡಲಿಲ್ಲ. ಒಂದುವೇಳೆ ಪ್ರತಿಕ್ರಿಯೆ ನೀಡಿದರೆ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಅನುಕೂಲವಾಗಿ ಪ್ರತಿಪಕ್ಷದಲ್ಲಿರುವವರು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಪಾಕಿಸ್ತಾನ ಪ್ರಕ್ರಿಯಿಸುವ ಧೈರ್ಯ ಮಾಡಲಿಲ್ಲ. ಇದು ಯಾವ ರೀತಿಯ ಬಾಂಧವ್ಯ ಎಂದು ಪ್ರಶ್ನಿಸಿದರು.
ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದಿದ್ದು ಅದೊಂದು ತಂತ್ರಗಾರಿಕೆ. ಅವರು ಜೈಲಿನಿದ್ದುಕೊಂಡೇ ದೇಶದಲ್ಲಿ ಕ್ರಾಂತಿ ನಡೆಸಲು ಸ್ವಾತಂತ್ರೃ ಯೋಧರನ್ನು ಅಣಿಗೊಳಿಸುತ್ತಿದ್ದರು. ಕ್ಷಮಾಪಣೆ ಕೇಳುವ ವ್ಯಕ್ತಿ ಇಂತಹ ಕೆಲಸ ಮಾಡುತ್ತಾರಾ? ಆದರೆ, ಸಾವರ್ಕರ್ ವಿರುದ್ಧ ನಿರಂತರವಾಗಿ ಅಪಪ್ರಚಾರ ನಡೆಯುತ್ತಿರುವುದು ಬೇಸರದ ಸಂಗತಿ. ಹಾಗಾಗಿ ಸಾವರ್ಕರ್ ವ್ಯಕ್ತಿತ್ವವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡಬೇಕು ಎಂದರು.
ಸಾಹಿತಿ ಎಸ್.ಎಲ್. ಭೈರಪ್ಪ ಮಾತನಾಡಿ, ಸೋನಿಯಾ ಗಾಂಧಿ ಅಧಿಕಾರದಲ್ಲಿದ್ದ ಸಂದರ್ಭ ದೇಶದಲ್ಲಿ ಕ್ರೈಸ್ತರಿಗೆ ಹೆಚ್ಚಿನ ಆದ್ಯತೆ ನೀಡಿದರು. ಕೆಲವು ರಾಜ್ಯಗಳಲ್ಲಿ ಕ್ರೈಸ್ತರನ್ನು ಮುಖ್ಯಮಂತ್ರಿಯಾಗಿ ಮಾಡಿದರು. ಅಲ್ಲದೆ, ಕೇಂದ್ರದಲ್ಲಿ ಕ್ರೈಸ್ತರಿಗೆ ಪ್ರಮುಖ ಖಾತೆಗಳನ್ನು ನೀಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶದಲ್ಲಿ ಸೇವೆಯ ಹೆಸರಿನಲ್ಲಿ ಮತಾಂತರ ಮಾಡಿದವರಿಗೆ ಭಾರತ ರತ್ನ ನೀಡಲಾಗಿದೆ. ಆದರೆ, ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದರೂ ಅವರಿಗೆ ಭಾರತ ರತ್ನ ನೀಡಿಲ್ಲದೆ ಇರುವುದು ಬೇಸರದ ವಿಚಾರ. ಸಾವರ್ಕರ್ ಅವರನ್ನು ಕಡೆಗಣಿಸಿದ ರೀತಿಯಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಕಡೆಗಣಿಸಲಾಗಿದೆಯೇ ಎಂಬ ಅನುಮಾನ ಮೂಡುತ್ತದೆ. ಆದರೆ ಮತ್ತೊಂದೆಡೆ ಸ್ವಾಮೀಜಿ ಆದವರಿಗೆ ಯಾವುದೇ ಟೈಟಲ್‌ಗಳ ಅವಶ್ಯಕತೆ ಇಲ್ಲ ಎಂಬ ಅಭಿಪ್ರಾಯವೂ ಸಹ ಮೂಡುತ್ತದೆ ಎಂದು ಹೇಳಿದರು.
ಸ್ವಾತಂತ್ರೃ ಸಂದರ್ಭ ಕ್ರಾಂತಿಯಿಂದ ಜೈಲಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಯಿತು. ಇದು ಸಾಕಷ್ಟು ಜನರಿಗೆ ಸಂಕಷ್ಟವನ್ನು ತಂದೊಡ್ಡಿತು. ಆ ಸಂದರ್ಭ ದೇಶಕ್ಕೆ ಬಂದ ಮಹಾತ್ಮಗಾಂಧಿ ಅವರು ಅಹಿಂಸಾತ್ಮಕ ಹೋರಾಟ ಪರಿಚಯಿಸಿದರು. ಇದು ಕೆಲವು ಕ್ರಾಂತಿಕಾರಿಗಳಿಗೆ ಇಷ್ಟವಾಯಿತು. ಬ್ರಿಟಿಷರಿಗೂ ಅದೇ ಬೇಕಾಕಿತ್ತು. ಆ ಸಂದರ್ಭದಲ್ಲಿ ಮಹಾತ್ಮಗಾಂಧಿ ‘ಈಶ್ವರ ಅಲ್ಲ ತೇರೇ ನಾಮ್’ ಎಂಬ ಸಂದೇಶ ನೀಡಿದರು. ಹಿಂದುಗಳು ಈ ಗೀತೆಯನ್ನು ದೇವಸ್ಥಾನದಲ್ಲೂ ಹಾಡಲು ಪ್ರಾರಂಭಿಸಿದರು. ಆದರೆ, ಒಬ್ಬ ಮುಸ್ಲಿಂ ಸಹ ಈ ಸಂದೇಶವನ್ನು ಒಪ್ಪಲಿಲ್ಲ ಎಂದರು.
ವೇದಿಕೆಯಲ್ಲಿ ಸಾವರ್ಕರ್ ಪ್ರತಿಷ್ಠಾನ ಅಧ್ಯಕ್ಷೆ ಡಾ.ಯಶಸ್ವಿನಿ, ಆದಿತ್ಯ ಆಸ್ಪತ್ರೆ ಸಂಸ್ಥಾಪಕ ಡಾ.ಚಂದ್ರಶೇಖರ್ ಇದ್ದರು.