

ಹುಬ್ಬಳ್ಳಿ: ನಗರದ ಕಲಾ ಸುಜಯ ಸಂಸ್ಥೆಯ ವತಿಯಿಂದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಅಂಗವಾಗಿ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಆ. 15ರಂದು ಸಂಜೆ 5.30ಕ್ಕೆ ವೀರ ಭಾರತಿ ನೃತ್ಯ ರೂಪಕ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಸುಜಯ ಶಾನಭಾಗ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರ ಭಾರತಿ ನೃತ್ಯ ರೂಪಕವು ಒಂದು ತಾಸು ಪ್ರದರ್ಶನಗೊಳ್ಳಲಿದೆ. 75 ನುರಿತ ಕಲಾವಿದರು ರಾಷ್ಟ್ರ ಭಕ್ತಿಯ ನೃತ್ಯ ಪ್ರದರ್ಶನ ನೀಡುವರು ಎಂದರು.
ಕಲಾ ಸುಜಯ ತಂಡದ 225ನೇ ಪ್ರಸ್ತುತಿ ಇದಾಗಿದ್ದು, ಹುಬ್ಬಳ್ಳಿ ನಗರದಲ್ಲಿ ಮೂರನೇ ಬಾರಿ ಈ ರೂಪಕ ಪ್ರದರ್ಶನಗೊಳ್ಳಲಿದೆ. ಎರಡು ವರ್ಷದಿಂದ 25 ವರ್ಷದೊಳಗಿನ 75 ಕಲಾವಿದರು ಇದರಲ್ಲಿದ್ದಾರೆ ಎಂದು ಹೇಳಿದರು.
ನೃತ್ಯ ರೂಪಕ ಪ್ರದರ್ಶನದ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಪ್ರಜ್ಞಾಪ್ರವಾಹ ಅಖಿಲ ಭಾರತೀಯ ಸಹ ಸಂಯೋಜಕ ರಘುನಂದನ್ ಉದ್ಘಾಟಿಸುವರು.
ಮೇಯರ್ ವೀಣಾ ಬರದ್ವಾಡ, ಶಾಸಕ ಮಹೇಶ ಟೆಂಗಿನಕಾಯಿ, ಅಂಕಣಕಾರ ರೋಹಿತ್ ಚಕ್ರತಿರ್ಥ, ಕ್ಷಮತಾ ಸೇವಾ ಸಂಸ್ಥೆ ಸಂಚಾಲಕ ಗೋವಿಂದ ಜೋಶಿ, ದಕ್ಷಿಣ ಕನ್ನಡ ಬ್ರಾಹ್ಮಣ ಸಂಘದ ಅಧ್ಯಕ್ಷ ಅನಂತ ಪದ್ಮನಾಭ ಐತಾಳ, ಬಿಲ್ಲವ ಸಮಾಜದ ಅಧ್ಯಕ್ಷ ಆನಂದ ಪೂಜಾರಿ, ಡಾ. ಕ್ರಾಂತಿಕಿರಣ, ಆನಂದ ಗುರುಸ್ವಾಮಿ, ಎಂ.ಎ. ಸುಬ್ರಹ್ಮಣ್ಯ, ಎಸ್.ಬಿ. ಶೆಟ್ಟಿ ಭಾಗವಹಿಸುವರು ಎಂದರು.
ಕಲಾ ಸುಜಯ ಸಂಸ್ಥೆ ಸಂಚಾಲಕ ಜೆ.ಎಲ್. ಶಾನಭಾಗ, ಹರ್ಷ ಪಟ್ಟಾಭಿ ಗೋಷ್ಠಿಯಲ್ಲಿದ್ದರು.