ಸಂಯುಕ್ತ ಪರ ಪ್ರಚಾರಕ್ಕೆ ವೀಣಾ ಕಾಶಪ್ಪನವರ

Veena Kashappana for Samyukta campaign
ಬಾಗಲಕೋಟೆಯಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪರ ಮತಯಾಚನೆಯ ರೋಡ್‌ನಲ್ಲಿ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರನ್ನು ಕಾರ್ಯಕರ್ತರು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು. ಈ ವೇಳೆ ಕೈಯಲ್ಲಿ ಕಾಂಗ್ರೆಸ್ ಬಾವುಟ ಹಿಡಿದು ಹೆಗಲ ಮೇಲೆಯೇ ಕುಳಿದು ಡ್ಯಾನ್ಸ್ ಮಾಡಿದ ವಿಜಯಾನಂದ.
Published on

ಬಾಗಲಕೋಟೆ: ಕಾಂಗ್ರೆಸ್ ಪರವಾಗಿ ಪ್ರಚಾರಕ್ಕೆ ವೀಣಾ ಬರುತ್ತಾರೋ ಬರಲ್ವೋ…? ಅಕ್ಕ- ತಂಗಿ ಜೋಡಿಯಾಗಿ ಪ್ರಚಾರ ಕಣದಲ್ಲಿ ಅಬ್ಬರಿಸುತ್ತಾರಾ? ಒಗ್ಗಟ್ಟು ಪ್ರದರ್ಶಿಸುತ್ತಾರಾ? ಅಸಮಾಧಾನ ಶಮನ ಆಗುತ್ತಾ? ಹೀಗೆ ಕೆಲವು ದಿನಗಳಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕಾಡುತ್ತಿದ್ದ ಪ್ರಶ್ನೆಗಳಿಗೆ ಶುಕ್ರವಾರ ತೆರೆ ಬಿದ್ದಿದೆ.

ಕಾಂಗ್ರೆಸ್ ಟಿಕೆಟ್ ಸಿಕ್ಕಿಲ್ಲವೆಂದು ಮುನಿಸಿಕೊಂಡಿದ್ದ ವೀಣಾ ಕಾಶಪ್ಪನವರ ಕೊನೆಗೂ ಪಕ್ಷದ ಆದೇಶಕ್ಕೆ ತಲೆಬಾಗಿ, ಪಕ್ಷದ ಅಧಿಕೃತ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಇಳಿದಿದ್ದಾರೆ. ಶುಕ್ರವಾರ ಬಾಗಲಕೋಟೆಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾದ ಮತಬೇಟೆಯ ರೋಡ್ ಶೋಗೆ ಕೊನೆ ಕ್ಷಣದಲ್ಲಿ ವೀಣಾ ಕಾಶಪ್ಪನವರ ದಂಪತಿ ಸಮೇತರಾಗಿ ಕಾಣಿಸಿಕೊಳ್ಳುವ ಮೂಲಕ ಮಿಂಚುಹರಿಸಿದ್ದಾರೆ.

ಹುನಗುಂದ ಶಾಸಕ, ಪತಿ ವಿಜಯಾನಂದ ಜೊತೆ ರೋಡ್ ಶೋಗೆ ಆಗಮಿಸಿದ ವೀಣಾ ಅವರನ್ನು ಕಾಣುತ್ತಿದ್ದಂತೆ ಕಾರ್ಯಕರ್ತರಲ್ಲಿ ತೀವ್ರ ಉತ್ಸಾಹ ಇಮ್ಮಡಿಗೊಳಿಸಿತು. ವೀಣಾ ಪರವಾಗಿ ಜೈಕಾರ ಹಾಕಿ ಕುಣಿದು ಕುಪ್ಪಳಿಸಿದರು. ಅಂಬೇಡ್ಕರ್ ವೃತ್ತದಲ್ಲಿ ಸಂಯುಕ್ತ ಹಾಗೂ ವೀಣಾ ಕಾಶಪ್ಪನವರ ಜೊತೆಯಾಗಿ ಕಾರ್ಯಕರ್ತರ ಕಡೆಗೆ ಕೈ ಬೀಸಿ, ಇಬ್ಬರು ಕೈ ಹಿಡಿದುಕೊಂಡು ಮೇಲೆತ್ತಿದಾಗ ಕಾರ್ಯಕರ್ತರು ಕಿಂಗ್ ಪ ಕಿಂಗ್ ಎಸ್ ಆರ್ ಕೆ ಕಿಂಗ್, ವೀಣಾ ಕಾಶಪ್ಪನವರಗೆ ಜೈ ಎಂದು ಮುಗಿಲು ಮುಟ್ಟುವಂತೆ ಕೂಗತೊಡಗಿದರು.

ಇನ್ನು ದಂಪತಿ ಸಮೇತರಾಗಿ ಕಾರ್ಯಕರ್ತರ ನಡುವೆ ಬಂದಾಗಲೂ ಕೇಕೆ, ಶಿಳ್ಳೆ, ಚಪ್ಪಾಳೆಗಳ ಸುರಿಮಳೆಗೈದ ಕಾರ್ಯಕರ್ತರು, ಶಾಸಕ ವಿಜಯಾನಂದ ಕಾಶಪ್ಪನವರ ಅವರನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಕುಣಿದು ಕುಪ್ಪಳಿಸಿದರು. ವಿಜಯಾನಂದ ಸಹ ಹೆಗಲ ಮೇಲೆ ಕುಳಿತುಕೊಂಡು ಕೈಯಲ್ಲಿ ಪಕ್ಷದ ಬಾವುಟ ಹಿಡಿದು, ಡ್ಯಾನ್ಸ್ ಮಾಡಿದ್ದು, ರೋಡ್ ಶೋ ನ ಜೋಶ್ ಮತ್ತಷ್ಟು ಹೆಚ್ಚಿಸಿತ್ತು. ಉರಿವ ಬಿಸಿಲು ಲೆಕ್ಕಿಸದೇ ಶಾಸಕ ಕಾಶಪ್ಪನವರ ಸಹ ಕಾರ್ಯಕರ್ತರ ಜೊತೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ನಂಜಯ್ಯನಮಠ ಭರ್ಜರಿ ಸ್ಟೆಪ್

ರೋಡ್ ಶೋ ನಲ್ಲಿ ಮಾಜಿ ಶಾಸಕ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಸಹ ಕಾರ್ಯಕರ್ತರ ಒತ್ತಾಯದ ಮೇರಿಗೆ ಭರ್ಜರಿ ಸ್ಟೆಪ್ ಹಾಕಿ ಗಮನ ಸೆಳೆದರು. ಮಹಿಳೆಯರು, ಯುವತಿಯರು, ಕಾರ್ಯಕರ್ತರು ನಂಜಯ್ಯಮಠ ಅವರೊಂದಿಗೆ ಸೇರಿಕೊಂಡು ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುತ್ತ ಸಾಗಿದರು. ಒಂದು ಕಡೆಗೆ ಹಿರಿಯ ನಾಯಕರು ವಾಹನದಲ್ಲಿ ಮೆರವಣಿಗೆ ಮೂಲಕ ಜನರತ್ತ ಕೈಬೀಸಿ ಸಂಯುಕ್ತ ಪರವಾಗಿ ಮತಬೇಟೆ ನಡೆಸಿದರೆ ಮತ್ತೊಂದು ಕಡೆಗೆ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಭರ್ಜರಿ ಸ್ಟೆಪ್ ಹಾಕಿ ಎಲ್ಲರ ಗಮನ ಸೆಳೆದಿದ್ದಲ್ಲದೇ ಉರಿಬಿಸಿಲಿನ ನಡುವೆಯೂ ಕಾಂಗ್ರೆಸ್ ಕಾರ್ಯಕರ್ತರಿಗೆ ಚುನಾವಣಾ ರಣೋತ್ಸವವನ್ನು ಇಮ್ಮಡಿಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net