

ಸುಬ್ರಹ್ಮಣ್ಯ: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಎರಡು ದಿನಗಳ ಕಾಲ ನಡೆದ ವಿವಿಧ ವೈದಿಕ ಕಾರ್ಯಕ್ರಮಗಳು ಗುರುವಾರ ಸಂಪನ್ನವಾದವು.
ಶ್ರೀ ದೇವಳದಲ್ಲಿ ನಡೆದ ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದ ವಿಚಾರಗಳ ಪರಿಹಾರಕ್ಕಾಗಿ ಕ್ಷೇತ್ರದ ತಂತ್ರಿ ಕೆಮ್ಮಿಂಜೆ ನಾಗೇಶ ತಂತ್ರಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು.
ಆರಂಭದಲ್ಲಿ ದೇವತಾ ಪ್ರಾರ್ಥನೆ ನಡೆದು ಮಹಾಗಣಪತಿ ಹೋಮ, ಬಳಿಕ ಶ್ರೀ ದೇವರಿಗೆ ಶತರುದ್ರಾಭಿಷೇಕ, ಮಹಾ ಮೃತ್ಯುಂಜಯ ಹೋಮ, ಮುಷ್ಟಿ ಕಾಣಿಕೆ ಸಮರ್ಪಣೆ, ಮಹಾಪೂಜೆ, ಪ್ರಸಾದ ವಿತರಣೆ ಜರುಗಿತು. ಸಂಜೆ ದುರ್ಗಾಪೂಜೆ, ಅಘೋರ ಹೋಮ, ಸುದರ್ಶನ ಹೋಮ, ರಂಗಪೂಜೆ ಬಾಧಕಾರ್ಪಣೆ, ಉಚ್ಚಾಟನೆ ನೆರವೇರಿತು. ನಂತರ ಬಿಂಬ ಕಲಶ ಪೂಜೆ, ಬಿಂಬ ಶುದ್ಧಿ, ಕಲಶಾಭಿಷೇಕ, ನವಕ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು, ಸದಸ್ಯರಾದ ಸತ್ಯನಾರಾಯಣ ಭಟ್ ಕಾಯಂಬಾಡಿ, ಧರ್ಮಪಾಲ ಗೌಡ ಮರಕಡ ಕಾಚಿಲ, ಸಂತೋಷ್ ರೈ ಬಳ್ಪ, ಮಾಯಿಲಪ್ಪ ಗೌಡ ಪಟ್ಟೆ ಎಣ್ಮೂರು, ಧರ್ಮಣ್ಣ ನಾಯ್ಕ ಗರಡಿ, ರಾಮಚಂದ್ರ ಭಟ್, ಮಾಲಿನಿ ಕುದ್ವ, ಪವಿತ್ರಾ ಮಲ್ಲೆಟ್ಟಿ ಉಪಸ್ಥಿತರಿದ್ದರು.