

ಎಂ.ಯೋಗೇಶ್ ಮೇಟಿಕುರ್ಕೆ ಹೊಸದುರ್ಗ
ತಾಲೂಕಿನ ವೇದಾವತಿ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಕಳೆದ ವಾರ ವೇದಾವತಿ ನದಿಗೆ ಭೇಟಿ ನೀಡಿದ್ದ ಗಣಿ ಇಲಾಖೆ ಅಧಿಕಾರಿಗಳು 200 ಟನ್ ಅಕ್ರಮ ಮರಳನ್ನು ವಶಪಡಿಸಿಕೊಂಡಿದ್ದು, ಇದಕ್ಕೆ ಸಾಕ್ಷಿಯಾಗಿದೆ.
ಶ್ರೀರಾಂಪುರ ಪೋಲಿಸ್ ಠಾಣೆ ವ್ಯಾಪ್ತಿಯ ವೇದಾವತಿ ನದಿ ಪಾತ್ರದ ಬಲ್ಲಾಳಸಮುದ್ರ, ಕೆಲ್ಲೋಡು ಇತರ ಸ್ಥಳಗಳಲ್ಲಿ ಕಳೆದ ಒಂದು ತಿಂಗಳಿನಿಂದ ರಾತ್ರಿ ವೇಳೆ ನದಿಗೆ ಯಂತ್ರಗಳನ್ನು ಇಳಿಸಿ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ.
ಇದನ್ನು ನದಿ ದಂಡೆಯಲ್ಲಿ ಶೇಖರಿಸಿ ನಂತರ ಕಡೂರು, ಅರಸೀಕೆರೆ ಹಾಗೂ ಇತರೆಡೆಗೆ ಸಾಗಿಸಲಾಗುತ್ತಿದೆ. ರಾತ್ರಿ ವೇಳೆ ಅಕ್ಕ-ಪಕ್ಕದ ಗ್ರಾಮದಲ್ಲಿ ಟಿಪ್ಪರ್ ಹಾಗೂ ಟ್ರ್ಯಾಕ್ಟರ್‌ಗಳ ಓಡಾಟ ಹೆಚ್ಚಾಗಿರುತ್ತದೆ ಎನ್ನುವುದು ಸ್ಥಳೀಯರು ನೀಡುವ ಮಾಹಿತಿಯಾಗಿದೆ.
ಅಕ್ರಮ ಮರಳು ಗಣಿಗಾರಿಕೆ ಮಾಫಿಯ ದಿನದಿಂದ ದಿನಕ್ಕೆ ತನ್ನ ಪ್ರಾಬಲ್ಯ ವಿಸ್ತರಿಸಿಕೊಳ್ಳುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಕಾನೂನು ಸುವ್ಯವಸ್ಥೆ ಹಾಳಾಗುವ ಅಪಾಯವಿದೆ.
ಸ್ಥಳೀಯ ಆಡಳಿತ ಇದಕ್ಕೆ ಕಡಿವಾಣ ಹಾಕುವಲ್ಲಿ ವಿಫಲವಾಗಿರುವುದೇ ದಂಧೆ ಹೆಚ್ಚಾಗಲು ಕಾರಣವಾಗಿದೆ.
ಬಲ್ಲಾಳಸಮುದ್ರ ಗ್ರಾಮದ ಸುತ್ತಮುತ್ತಲ ಪ್ರದೇಶಕ್ಕೆ ಭೇಟಿ ನೀಡಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಶ್ರಾವಣಿ ಹಾಗೂ ಶ್ರೀರಾಂಪುರ ಠಾಣೆ ಪೋಲಿಸರು ಅಕ್ರಮವಾಗಿ ಶೇಖರಿಸಲಾಗಿದ್ದ ಮರಳನ್ನು ವಶಪಡಿಸಿಕೊಂಡರು.
ಇಷ್ಟಾದರೂ ಅಕ್ರಮ ಮರಳುಗಾರಿಕೆ ನಿಂತಿಲ್ಲ. ಅಧಿಕಾರಿಗಳು ಇನ್ನಾದರೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ದಂಧೆಕೋರರಿಂದ ಮಾಜಿ ಸಚಿವರಿಗೆ ಧಮ್ಕಿ: ತಾಲೂಕಿನಲ್ಲಿ ಅಕ್ರಮ ಮರಳು ದಂಧೆ ಅವ್ಯಾಹತವಾಗಿದ್ದು, ಈ ಕುರಿತು ಮಾಧ್ಯಮಗಳ ಬಳಿ ಮಾತನಾಡಿದ ನಂತರ ದಂಧೆಕೋರರು ನನಗೆ ಪೋನ್ ಮಾಡಿ ನಿನಗೆ ತಾಕತ್ತಿದ್ದರೆ ಮರಳು ಸಾಗಿಸುವುದನ್ನು ನಿಲ್ಲಿಸು ಎಂದು ಧಮ್ಕಿ ಹಾಕುತ್ತಿದ್ದಾರೆ.
ಅಧಿಕಾರಿಗಳಿಗೆ ಮಾಹಿತಿಯಿದೆ ಎಂದು ಮಾಜಿ ಸಚಿವ ಗೂಳಿಹಟ್ಟಿ ಡಿ.ಶೇಖರ್ ಹೇಳಿದರು.
ಕಳೆದ ವಾರ ಹೊಸದುರ್ಗ ತಾಲೂಕಿನ ಹೇಮಾವತಿ ನದಿ ತೀರಕ್ಕೆ ಭೇಟಿ ನಿಡಿದ ವೇಳೆ ಬಲ್ಲಾಳಸಮುದ್ರ ಗ್ರಾಮದ ಬಳಿ ಸರ್ಕಾರಿ ಜಮೀನಿನಲ್ಲಿ ಅಕ್ರವಾಗಿ ದಾಸ್ತಾನು ಮಾಡಿದ್ದ 200 ಟನ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.ಶ್ರಾವಣಿ ಜಿಲ್ಲಾ ಗಣಿ, ಭೂವಿಜ್ಞಾನ ಇಲಾಖೆ ಅಧಿಕಾರಿ