ವಿಜೃಂಭಣೆಯ ನಾದಪೂಜಾ ಸೇವೆ

2ark6
Published on

ಅರಕಲಗೂಡು: ತಾಲೂಕಿನ ರಾಮನಾಥಪುರದ ಪ್ರಸನ್ನ ಸುಬ್ರಹ್ಮಣ್ಯೇಶ್ವರ ದೇವಾಲಯದ ರಥೋತ್ಸವ ಹಿನ್ನಲೆಯಲ್ಲಿ ಬುಧವಾರ ರಾತ್ರಿ ಶಾಂತೋತ್ಸವ ಹಾಗೂ ಸಂಗೀತೋತ್ಸವ ನಾದಪೂಜಾ ಸೇವೆ ವಿಜೃಂಭಣೆಯಿಂದ ನೆರವೇರಿತು.

ದೇವಾಲಯದ ಪ್ರಾಂಗಣದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಸ್ಥಾಪಿಸಿ ಪೂಜಾ ಕೈಂಕರ್ಯಗಳನ್ನು ಸಲ್ಲಿಸಲಾಯಿತು. ನಂತರ ವಿಶೇಷವಾಗಿ ಅಲಂಕರಿಸಿದ ಮಂಟಪದಲ್ಲಿ ಪ್ರತಿಷ್ಠಾಪಿಸಿ ದೇವಾಲಯದ ರಾಜಬೀದಿಯಲ್ಲಿ ಉತ್ಸವ ನಡೆಸಲಾಯಿತು.

ಈ ವೇಳೆ ಪ್ರತಿ ಸುತ್ತಿಗೊಂದರಂತೆ ಪ್ರತ್ಯೇಕ ವಾದ್ಯಪ್ರಕಾರದ ಮೂಲಕ ಸುಬ್ರಹ್ಮಣ್ಯಸ್ವಾಮಿಗೆ ಪೂಜೆ ಸಲ್ಲಿಸಲಾಯಿತು. ಸತತ ಮೂರು ತಾಸುಗಳ ಕಾಲ ವಿವಿಧ ರೀತಿಯ ವಾದ್ಯಗಳ ನಿನಾದ ಭಕ್ತರನ್ನು ಪುಳಕಗೊಳಿಸಿತು.

ಶಹನಾಯಿ, ಸ್ಯಾಕ್ಸೋಫೋನ್, ಚಂಡೆ, ಕ್ಲಾರಿನಿಯೋಟ್ ಮಕ್ಕಳ ಭಜನೆ ಮುಂತಾದ ವಾದ್ಯ ಪ್ರಾಕಾರಗಳು ಸುಬ್ರಹ್ಮಣ್ಯಸ್ವಾಮಿಗೆ ನಾದದ ಅಭಿಷೇಕವನ್ನು ಮಾಡಿದಂತೆ ಭಾಸವಾಯಿತು.

ಮೊದಲ ಸುತ್ತಿನಲ್ಲಿ ಪಂಚವಾದ್ಯ, ಎರಡನೇ ಸುತ್ತಿನಲ್ಲಿ ಮಂಗಳವಾದ್ಯ, ಮೂರನೇ ಸುತ್ತಿನಲ್ಲಿ ಶಹನಾಯಿ, ನಾಲ್ಕನೇ ಸುತ್ತಿನಲ್ಲಿ ಸ್ಯಾಕ್ಸೋಫೋನ್ ಮತ್ತು ಕ್ಲಾರಿನಿಯೋಟ್, ಮಗದೊಂದು ಸುತ್ತಿನಲ್ಲಿ ಚಂಡೆವಾದ್ಯದ ನಿನಾದದೊಂದಿಗೆ ಶ್ರೀ ಸ್ವಾಮಿಗೆ ಅರ್ಚನೆ ಮಾಡಲಾಯಿತು.

ಪರಿಣಿತರು ವಿವಿಧ ವಾದ್ಯಕ್ಕೆ ಭಕ್ತರನ್ನು ತಲೆದೂಗಿದರು. ಗೋವಿಂದ ಗೋವಿಂದ, ಕಂಡೆ ಹರಿಯ ಕಂಡೆ, ಓ ಪಾಂಡುರಂಗ ಪ್ರಭು ವಿಠಲ ಮುಂತಾದ ಗೀತೆಗಳು ಭಕ್ತರ ಮನಸೂರೆಗೊಂಡವು.

ಉತ್ಸವ ವೀಕ್ಷಿಸಲು ಬಂದಿದ್ದ ಭಕ್ತರು ಸತತವಾಗಿ 3 ತಾಸು ವಿವಿಧ ಸಂಗೀತ ವಾದ್ಯಗಳಿಗೆ ತಲೆದೂಗಿದರು. ಅಂತಿಮ ಪ್ರದಕ್ಷಿಣೆಯಲ್ಲಿ ಉತ್ಸವವನ್ನು ಕೂಡಿಕೊಂಡ ಚಂಡೆವಾದ್ಯ ಭಕ್ತರ ಎದೆಯಲ್ಲಿ ಸಂಚಲನ ಮೂಡಿಸಿತು. ವಾದ್ಯದೊಂದಿಗೆ ಲಯಬದ್ಧವಾದ ಕುಣಿತ ಮತ್ತಷ್ಟು ಮುದನೀಡಿತು. ನಾದಲೋಕವೇ ಧರೆಗಿಳಿದಂತೆ ಸುಬ್ರಹ್ಮಣ್ಯಸ್ವಾಮಿಯನ್ನು ಸಂಗೀತದಲ್ಲಿ ಸಂಪನ್ನಗೊಳಿಸಲಾಯಿತು. ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net