

ಪ್ರಶಾಂತ ಭಾಗ್ವತ, ಉಡುಪಿ
ದೇವರಿಗೆ ಸಂಬಂಧಿತ ವಿಶೇಷ ಹಬ್ಬ, ಪೂಜಾ ಸಂದರ್ಭಗಳಲ್ಲಿ ವಿಧಿ-ವಿಧಾನಕ್ಕಾಗಿ ವಿಶೇಷ ಪರಿಕರಗಳ ಅಗತ್ಯತೆಯೂ ಇರುತ್ತದೆ. ಅಂತಹ ಪರಿಕರದಲ್ಲಿ ಅನಂತನ ವೃತ (ನೋಪಿ)ದಲ್ಲಿ ಬಳಸುವ ಶೇಷನಾಗನನ್ನು ದರ್ಬೆಯಲ್ಲಿ ರಚಿಸುವ ವೇದಮೂರ್ತಿ ಕಾಶೀನಾಥ್ ಭಟ್ ಗಮನ ಸೆಳೆಯುತ್ತಾರೆ.
ಉಡುಪಿ ತಾಲೂಕಿನ ಕಲ್ಯಾಣಪುರದ ಶ್ರೀರಾಮಂಜನೇಯ ದೇವಸ್ಥಾನದ ಅರ್ಚಕರಾದ ಕಾಶೀನಾಥ್ ಭಟ್, ಸುಮಾರು 35 ವರ್ಷದಿಂದ ದರ್ಬೆಯಲ್ಲಿ ನಾಗನನ್ನು ತಯಾರಿಸಿ ದೇಗುಲಗಳಿಗೆ ಉಚಿತವಾಗಿ ನೀಡುತ್ತಿದ್ದಾರೆ.
ತಂದೆ ಹರಿನಾರಾಯಣ ಭಟ್ಟ ಅವರಿಂದ ಈ ಕಲೆಯನ್ನು ಅವರು ಕಲಿತಿದ್ದಾರೆ. ಕೆಮ್ಮಣ್ಣುವಿನಿಂದ ಹಸಿ ದರ್ಬೆಯನ್ನು ತಂದು, 15 ದಿನಗಳ ಕಾಲ ಒಣಗಿಸಿ, ಸಮತೊಟ್ಟು ಗೊಳಿಸಬೇಕಾಗುತ್ತದೆ. ಅದನ್ನು ಕೈಯಿಂದು ಹೆಣೆದು ಅಷ್ಟ ಪವಿತ್ರ ನಾಗಮಂಡಲದ ರೂಪದಲ್ಲಿ 2 ಅಡಿ ಎತ್ತರದ, ಏಳು ಹೆಡೆಯ ನಾಗದೇವರ ಬಿಂಬ ಸ್ವರೂಪ ರಚಿಸುತ್ತಾರೆ.
ಈ ಬಾರಿ 19 ನಾಗಬಿಂಬ ಕಲಾಕೃತಿ ರಚಿಸಿದ್ದು, ಉದ್ಯಾವರದ ವೀರ ವಿಠ್ಠಲ ದೇವಸ್ಥಾನ, ಚೇಂಪಿ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನ, ತೆಂಕಪೇಟೆಯ ಆಚಾರ್ಯ ಮಠ, ಕಲ್ಯಾಣಪುರದ ವೆಂಕಟರಮಣ ದೇವಸ್ಥಾನ, ಬ್ರಹ್ಮಾವರದ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನ ಹಾಗೂ ಹಿರಿಯ ಮನೆತನದಲ್ಲಿ ಆಚರಿಸುವ ಅನಂತ ದೇವರ ಪೂಜೆಗೆ ಉಚಿತವಾಗಿ ನೀಡುತ್ತಿದ್ದಾರೆ. ಇವರ ಈ ಧಾರ್ಮಿಕ ಸೇವೆ ಜನಮೆಚ್ಚುಗೆಗೆ ಪಾತ್ರವಾಗಿದೆ.
ಇದು ಬಹು ಅಪರೂಪದ ಕಲೆ ಹಾಗೂ ಕಾರ್ಯ. ಇದು ನಶಿಸಿದರೆ ಪೂಜಾ ಕಾರ್ಯಗಳಿಗೆ ಲಭಿಸದಂತಾಗುತ್ತದೆ. ಹೀಗಾಗಿ ನನ್ನೊಂದಿಗೆ ಕಾರ್ಯ ನಿರ್ವಹಿಸುವ ಅರ್ಚಕರಿಗೆ, ಪತ್ನಿಗೆ, ನಮ್ಮ ಮನೆಯ ಮಕ್ಕಳು-ಸೊಸೆಯಂದಿರಿಗೂ ನಾಗಬಿಂಬ ರಚಿಸುವ ತರಬೇತಿ ನೀಡಿದ್ದೇನೆ. ದೇವರ ಸೇವೆಯೊಂದಿಗೆ ಕಲೆ ಉಳಿಸುವ ಪ್ರಯತ್ನ ನನ್ನದು.| ವೇ.ಕಾಶೀನಾಥ್ ಭಟ್. ಅರ್ಚಕ, ಶ್ರೀರಾಮಂಜನೇಯ ದೇವಸ್ಥಾನ, ಕಲ್ಯಾಣಪುರ.