

ಯಲಬುರ್ಗಾ: ವಿಶ್ವಕರ್ಮ ಜಯಂತಿ ಸೆ.17ರಂದು ಪಟ್ಟಣದಲ್ಲಿ ವ್ಯವಸ್ಥಿತವಾಗಿ ಆಚರಿಸಲು ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಸೂಚಿಸಿದರು.
ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಯಂತ್ಯುತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕಲೆಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಪ್ರತಿಯೊಬ್ಬರೂ ವಿಶ್ವಕರ್ಮರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿಶ್ವಕರ್ಮರು ಜನರ ಕಷ್ಟಗಳಿಗೆ ದನಿಯಾಗಿದ್ದರು.
ಸಮಾಜದ ಕಲ್ಯಾಣಕ್ಕೆ ತಮ್ಮ ಸೇವೆ ಪಣವಾಗಿಟ್ಟಿದ್ದರು. ವೇದ ಪುರಾಣಗಳಲ್ಲಿ ವಿಶ್ವಕರ್ಮರನ್ನು ದೇವರುಗಳ ದೇವರು, ಬ್ರಹ್ಮಾಂಡದ ಸೃಷ್ಟಿಕರ್ತ ಹಾಗೂ ಕಲೆ, ವಾಸ್ತುಶಿಲ್ಪದ ಸೃಷ್ಟಿಕರ್ತ ಎಂದು ಬಣ್ಣಿಸಲಾಗಿದೆ. ಒಟ್ಟಾರೆ ಇವರು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಶಿಷ್ಟಾಚಾರದನ್ವಯ ಆಮಂತ್ರಣ ಪತ್ರಿಕೆ ಮುದ್ರಣಕ್ಕೆ ಕ್ರಮ ವಹಿಸಬೇಕು. ಒಟ್ಟಾರೆ ವಿಶ್ವಕರ್ಮ ಜಯಂತಿ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ತಹಸೀಲ್ದಾರ್ ನಿರ್ದೇಶನ ನೀಡಿದರು. ವಿಶ್ವಕರ್ಮ ಸಮಾಜದ ಅಧ್ಯಕ್ಷ ಶಂಕ್ರಪ್ಪ ಬಡಿಗೇರ, ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಸದಸ್ಯ ಅಮರೇಶ ಹುಬ್ಬಳ್ಳಿ, ಪ್ರಮುಖರಾದ ರೇವಣೆಪ್ಪ ಹಿರೇಕುರಬರ, ಕಳಕಪ್ಪ ತಳವಾರ ಇದ್ದರು.