ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಾಲಕರಿಗೆ ವಿವಿಧ ಬಗೆಯ ಮನರಂಜನಾ ಆಟೋಟಗಳನ್ನು ಹಮ್ಮಿಕೊಳ್ಳಲಾಯಿತು.
ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ ರವರು ಸಸಿಗೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ವೈಯಕ್ತಿಕ ಓರೆಕೋರೆಗಳನ್ನು ತಿದ್ದಿಕೊಂಡು ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಲು ಕ್ರೀಡೆಗಳು ನೆರವಾಗುತ್ತವೆ. ದೈಹಿಕ, ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ಸಹಾಯ ಮಾಡುತ್ತವೆ, ಕ್ರೀಡೆಯಿಂದ ಶಿಸ್ತು, ಸಂಯಮ, ಆರೋಗ್ಯ, ಧೈರ್ಯ ಮತ್ತು ಸಾಹಸ ಗುಣಗಳನ್ನು ವೃದ್ಧಿಸುತ್ತದೆ. ಪಾಲಕರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳ ಜಂಜಾಟದ ನಡುವೆ ತಮ್ಮ ಅಮೂಲ್ಯವಾದ ಸಮಯವನ್ನು ಬಿಡುವು ಮಾಡಿಕೊಂಡು ಆಟೊಟಗಳಲ್ಲಿ ಭಾಗವಹಿಸಿದ್ದೀರಿ, ಈ ಮೂಲಕ ತಮ್ಮ ಜಂಜಾಟದ ಒತ್ತಡವನ್ನು ಮರೆತು ಮಕ್ಕಳ ಹಿತ ಸಂತೋಷಕ್ಕಾಗಿ ತಾವೆಲ್ಲ ಮಕ್ಕಳ ಹಾಗೆಯೇ ಚೈತನ್ಯದಿಂದ ಆಟೋಟಗಳ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೀರಿ. ಕ್ರೀಡೆ ಇಚ್ಛಾಶಕ್ತಿ, ಏಕಾಗ್ರತೆ ಮತ್ತು ಸ್ಪರ್ಧಾ ಮನೋಭಾವವನ್ನು ಬೆಳೆಸುತ್ತದೆ. ಹಾಗಾಗಿ ಎಲ್ಲಾ ಪಾಲಕರು ತಾವು ಕೂಡ ಸಂತೋಷದಿಂದ ಆಟೋಟಗಳಲ್ಲಿ ಭಾಗವಹಿಸಿ ತಮ್ಮ ಮಕ್ಕಳಿಗೆ ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಎಂದು ಪಾಲಕರಿಗೆ ಕರೆ ನೀಡಿದರು.
ಅತಿಥಿಗಳಾದ ಶ್ರೀ ಪಿ. ಎಚ್. ಕಡಿವಾಲ ರವರು ಮಕ್ಕಳ ಆಟ ಪಾಠವನ್ನು ನೋಡಿ ಸಂತಸ ಪಡುವ ಪಾಲಕರು ಸ್ವತಹ ತಾವೇ ಕ್ರೀಡೆಗಳಲ್ಲಿ ಪಾಲ್ಗೊಂಡು ಕ್ರೀಡಾ ಸ್ಪೂರ್ತಿ ಮೆರೆದಿದ್ದೀರಿ. ಜೊತೆಗೆ ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯಲ್ಲಿ ಪಾಲ್ಗೊಂಡಿರುವುದನ್ನು ಕಂಡು ತಮ್ಮ ಮಕ್ಕಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದ ಕ್ಷಣವು ರೋಮಾಂಚನವಾಗಿತ್ತು. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ದಿನನಿತ್ಯ ಮನೆಯಲ್ಲಿ ಕುಟ್ಟೋದು, ಬೀಸೋದು, ಹೊಲದಲ್ಲಿ ಕೆಲಸ ಮಾಡುವುದರಿಂದ ಅವರಿಗೆ ಯಾವುದೇ ರೀತಿಯಾದ ಖಾಯಿಲೆ
ಬರದೇ ಪ್ರತಿನಿತ್ಯ ಚೈತನ್ಯದಿಂದ ಜೀವನವನ್ನು ಮಾಡುತ್ತಿದ್ದರು. ಆದರೆ ಇಂದು ಪಾಲಕರು ತಮ್ಮ ಕೆಲಸಗಳ ಸಹಾಯಕ್ಕೆ ಯಂತ್ರಗಳ ಮೊರೆ ಹೋಗುತ್ತಿದ್ದರಿಂದ ಪಾಲಕರಲ್ಲಿ ಚೈತನ್ಯ ಕಡಿಮೆಯಾಗಿ ನೂರಾರು ಖಾಯಿಲೆಗಳು ಬರಲು ಕಾರಣವಾಗಿದೆ. ಹಾಗಾಗಿ ಪಾಲಕರು ಇಂತಹ ಆಟೋಟಗಳಲ್ಲಿ ಭಾಗವಹಿಸಿ ತಾವು ದೈಹಿಕವಾಗಿ ಮಾನಸಿಕವಾಗಿ ಸದೃಢಗೊಳ್ಳಬೇಕು ಎಂದರು.
ಸಂಸ್ಥೆಯ ನಿರ್ದೇಶಕರಾದ ಡಾ. ಪವನ. ಎಸ್. ಹುಯಿಲಗೋಳ ರವರು ಹಾಗೂ ಆಡಳಿತ ಅಧಿಕಾರಿಗಳಾದ ಡಾ. ಗಂಗೂಬಾಯಿ ಪವಾರ ರವರು ಎಲ್ಲಾ ಪಾಲಕರಿಗೆ ಶುಭಾಶಯ ಕೋರಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ. ಆರ್. ಡೊಳ್ಳಿನ ರವರು ಪಾಲಕರಿಗೆ ಸ್ಪರ್ಧೆಗಳ ಹೆಸರು ಹಾಗೂ ಅವುಗಳ ನಿಯಮಗಳ ಕುರಿತು ವಿವರಣೆ ನೀಡಿದರು.
ಪಾಲಕರಾದ ಶ್ರೀ ನಿಂಗಪ್ಪ ಬಿಚಗತ್ತಿ, ಶ್ರೀಮತಿ ವೇದಾ ಬಿದರಿ ಹಾಗೂ ಶ್ರೀಮತಿ ಚೇತನಾ ಸೀತಾರಹಳ್ಳಿ ರವರು ಆಟೋಟಗಳ ಕುರಿತು ಸಂತೋಷ ಭರಿತ ನುಡಿಗಳನ್ನು ಹೇಳಿದರು. ಕ್ರೀಡಾಕೂಟದ ಮಾರ್ಗದರ್ಶಕರಾದ ಶಿಕ್ಷಕಿ ಶ್ರೀಮತಿ ಸುಮಂಗಲಾ ಆಸಂಗಿ ಹಾಗೂ ಶಾಲಾ ಕ್ರೀಡಾ ಮಂತ್ರಿಯಾದ ಕು. ಶ್ರೇಯಾ ತಿಪ್ಪನ್ನವರ ಪಾಲಕರಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು.
ಪಾಲಕರ ಕ್ರೀಡಾಕೂಟದಲ್ಲಿ 80 ಕ್ಕೂ ಹೆಚ್ಚು ಪಾಲಕರು ಭಾಗವಹಿಸಿದ್ದರು. ಪಾಲಕರಿಗಾಗಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಆಟೋಟಗಳನ್ನು ಹಮ್ಮಿಕೊಳ್ಳಲಾಗಿತ್ತು. ಪುರುಷರಿಗೆ ಸ್ಲೋ ಸೈಕ್ಲಿಂಗ್, ಮ್ಯೂಸಿಕಲ್ ಚೇರ್ ಹಾಗೂ ಇನ್ ಆಂಡ್ ಔಟ್ ಕ್ರೀಡೆಗಳನ್ನು ಮತ್ತು ಮಹಿಳೆಯರಿಗಾಗಿ ಲೂಡೋ ಚಾಲೆಂಜಿಂಗ್, ಮ್ಯೂಸಿಕಲ್ ಚೇರ್ ಹಾಗೂ ತಲೆಯ ಮೇಲೆ ತಂಬಿಗೆ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಪಾಲಕರಿಗೆ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಂದು ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಲಾಗುವುದು.
ಶಾಲಾ ವಿದ್ಯಾರ್ಥಿಗಳಾದ ಕು. ಆದಿತ್ಯ ಹಿರೇಮಠ ಹಾಗೂ ಚೇತನ್ ಗೌಡ ರವರು ಹಾಡಿದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಪ್ರಭಾವತಿ ಹಿರೇಮಠ ನಿರೂಪಿಸಿದರು, ಶ್ರೀಮತಿ ಆರ್. ಬಿ. ವೆಂಕಟಾಪುರ ಸ್ವಾಗತಿಸಿದರು, ಶ್ರೀಮತಿ ವೀಣಾ ಹುಬ್ಬಳ್ಳಿ ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಅತಿಥಿ ಮಹನೀಯರು, ಮುಖ್ಯೋಪಾಧ್ಯಾಯರು, ಶಾಲೆಯ ಸಮಸ್ತ ಶಿಕ್ಷಕ/ಶಿಕ್ಷಕಿಯರು, ಸಿಬ್ಬಂದಿ ವರ್ಗದವರು, ಪಾಲಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.