ವಿಡಿಎಸ್ ಕ್ಲಾಸಿಕ್ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ.

IMG-20240228-WA0020
Published on

ಗದಗ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು. ಶಾಲಾ ಗುರು ಮಾತೆಯರು ವಿಜ್ಞಾನಿ ಸರ್ ಸಿ. ವಿ. ರಾಮನ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.

ಶಾಲೆಯ ವಿಜ್ಞಾನ ಶಿಕ್ಷಕಿಯರಾದ ಶ್ರೀಮತಿ ಅರ್ಚನಾ ಗಿರಿತಿಮ್ಮನ್ನವರ ಮಾತನಾಡಿ  ಪ್ರತಿ ವರ್ಷ ಫೆಬ್ರುವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಪ್ರತಿಭಾನ್ವಿತ ವಿಜ್ಞಾನಿ ಸರ್ ಸಿ. ವಿ. ರಾಮನ್ ಅವರು "ರಾಮನ್ ಪರಿಣಾಮದ" ಆವಿಷ್ಕಾರದ ಸ್ಮರಣಾರ್ಥವಾಗಿ,  ಈ ಆವಿಷ್ಕಾರವು 1930 ರಲ್ಲಿ ಸರ್ ಸಿ.ವಿ. ರಾಮನ್ ಅವರಿಗೆ ಭೌತಶಾಸ್ತ್ರದಲ್ಲಿ ಉದಾತ್ತ ಪ್ರಶಸ್ತಿಯನ್ನು ತಂದುಕೊಟ್ಟಿತು. ವಿಜ್ಞಾನ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲನ್ನು ಗುರುತಿಸಿತು ಮತ್ತು ಭಾರತವನ್ನು ವೈಜ್ಞಾನಿಕ ಸಂಶೋಧನೆಯ ವಿಶ್ವ ಭೂಪಟದಲ್ಲಿ ಇರಿಸಿತು. ಜೊತೆಗೆ ವಿಜ್ಞಾನದ ಮಹತ್ವದ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಶಾಲೆಯ ಹಿರಿಯ ಶಿಕ್ಷಕಿಯರಾದ ಶ್ರೀಮತಿ ರೇಣುಕಾ ವೆಂಕಟಾಪುರ ರವರು  ರಾಷ್ಟ್ರೀಯ ವಿಜ್ಞಾನ ದಿನ ಎಲ್ಲಾ ವಯೋಮಾನದ ಭಾರತೀಯರಲ್ಲೂ ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುವ ಮತ್ತು ಆಸಕ್ತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಆ ಮೂಲಕ ಭಾರತೀಯರು ಆಸಕ್ತಿದಾಯಕವಾದ ವಿಜ್ಞಾನ ಪ್ರಪಂಚದಲ್ಲಿ ತೊಡಗುವಂತೆ ಮಾಡುವ ಮಹತ್ವದ ಜವಾಬ್ದಾರಿ ಬಂದಿದೆ ಎಂದು ತಮ್ಮ ಅಧ್ಯಕ್ಷೀಯ ನುಡಿಗಳನ್ನು ವ್ಯಕ್ತಪಡಿಸಿದರು.

ಶಾಲೆಯ ಇನ್ನೋರ್ವ ವಿಜ್ಞಾನ ಶಿಕ್ಷಕಿಯರಾದ ಶ್ರೀಮತಿ ಶ್ವೇತಾ ಮೇಲಗಿರಿ ರವರು ಅಪರಾಧ ಚಟುವಟಿಕೆಗಳನ್ನು ಭೇದಿಸುವಲ್ಲಿ ವಿಜ್ಞಾನದ ಪಾತ್ರ ಕುರಿತು ಹಾಗೂ  ವಿಜ್ಞಾನದ ವಿಸ್ಮಯಗಳು ನಮ್ಮ ಜಗತ್ತನ್ನು ಬದಲಿಸುವ ಸಾಮರ್ಥ್ಯ ಹೊಂದಿದೆ. ವಿಜ್ಞಾನಿಗಳನ್ನು ಬೆಂಬಲಿಸಿ ವೈಜ್ಞಾನಿಕ ಅನ್ವೇಷಣೆಯ ಜಗತ್ತನ್ನು ಹರಿಯಲು ಅವರಿಗೆ ಅವಕಾಶ ಒದಗಿಸಬೇಕು. ವೈಜ್ಞಾನಿಕ ಮನೋಭಾವ ಬೆಳೆಸುವ ಮೂಲಕ ಆವಿಷ್ಕಾರಗಳು ಮತ್ತು ಜ್ಞಾನ ಕೇಂದ್ರಿತ ಭವ್ಯ ಭವಿಷ್ಯ ನಿರ್ಮಿಸಲು ಸಾಧ್ಯವಿದೆ, ಭಾರತೀಯ ವಿಜ್ಞಾನ ದಿನದ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ವಿಜ್ಞಾನವನ್ನು ಸಂಭ್ರಮಿಸಿ, ಜಗತ್ತಿನ ವಿಸ್ಮಯಗಳನ್ನು ಅರಿತುಕೊಳ್ಳಲು ಮತ್ತು ಮಾನವ ಜನಾಂಗಕ್ಕೆ ನೆರವಾಗಬಲ್ಲ ಹೊಸ ಅನ್ವೇಷಣೆಗಳನ್ನು  ನಡೆಸಲು ಮುಂದಿನ ತಲೆಮಾರುಗಳಿಗೆ ಸ್ಪೂರ್ತಿ ನೀಡುವ ಅಗತ್ಯತೆ ಇದೆ ಎಂದರು.

ಪ್ರತಿಜ್ಞಾ ವಿಧಿ: ಇದೇ ಸಂದರ್ಭದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ  ಮಕ್ಕಳು ವೈಚಾರಿಕ ಮನೋಭಾವನೆಯನ್ನು ಬೆಳೆಸಿಕೊಳ್ಳುವ ಉದ್ದೇಶದಿಂದ  ಶ್ರೀಮತಿ ಅರ್ಚನಾ ಗಿರಿತಿಮ್ಮಣ್ಣವರ ಮಕ್ಕಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. 

ಕು. ಅನನ್ಯ ಬಿದರಕುಂದಿ ಮತ್ತು ಸಂಗಡಿಗರು ವಿಜ್ಞಾನದ ಹಾಡು ಹಾಡಿದರು. ಕು. ಶಿವಾನಂದ ಕೆ ಸಂಪ್ರದಾಯಗಳ ಹಿಂದಿರುವ ವಿಜ್ಞಾನದ ಸತ್ಯದ ಕುರಿತು, ಕು. ಮಹೇಶ್ ಇದ್ಲಿ ಸರ್ ಸಿವಿ ರಾಮನ್ ಅವರ ಕುರಿತು ಪರಿಚಯ ಭಾಷಣ, ಕು. ಸೃಷ್ಟಿ ಧರ್ಮಾಯತ್ ಶ್ರೇಷ್ಠ ವಿಜ್ಞಾನಿ ಅಬ್ದುಲ್ ಕಲಾಂ ರವರ ಕುರಿತು ಹಾಗೂ ಕು. ನಿಹಾಲ್ ಪೂಜಾರ ಗೆಲಿಲಿಯೋ ಗೆಲಿಲಿ ರವರ ಕುರಿತು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕು. ತೇಜಶ್ರೀ ಹಾದಿ ಮತ್ತು ಸಂಗಡಿಗರು ಜಲಚಕ್ರದ ಕುರಿತು  ಹಾಡನ್ನು ಹಾಡಿದರು. 

ಕು. ಅಕುಲ್ ಪೂಜಾರ ನಿರೂಪಿಸಿದರು, ಶಿಕ್ಷಕಿಯರಾದ ಶೋಭಾ ಪೂಜಾರ ಸ್ವಾಗತಿಸಿದರು, ಗಾಯಿತ್ರಿ ಅಸುಂಡಿ ರವರು ವಂದಿಸಿದರು.  ಕಾರ್ಯಕ್ರಮದಲ್ಲಿ ಶಾಲೆಯ ಸಮಸ್ತ ಶಿಕ್ಷಕ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net