

ಪುತ್ತೂರು: ಪರೀಕ್ಷೆಯ ಸಂದರ್ಭದಲ್ಲಿ ಒತ್ತಡ, ಆತಂಕಗಳು ಸಹಜ. ಇವೆಲ್ಲವನ್ನೂ ಹಿಮ್ಮೆಟ್ಟಿಸಿ, ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಸಮಯ ನಿರ್ವಹಣೆಯತ್ತ ಗಮನವನ್ನು ಕೇಂದ್ರೀಕರಿಸಿದಲ್ಲಿ ಜೀವನದ ಯಾವುದೇ ಪರೀಕ್ಷೆಗಳನ್ನು ಸಲೀಸಾಗಿ ಎದುರಿಸುವಲ್ಲಿ ವಿದ್ಯಾರ್ಥಿಗಳು ಸಫಲರಾಗುವುದು ಖಂಡಿತ ಎಂದು ಪ್ರವೇಶಾತಿ ಮತ್ತು ಉದ್ಯೋಗ ಘಟಕ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ ಮುಖ್ಯಸ್ಥ ವಂದನಾ ಶಂಕರ್ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ನಡೆಸಲಾದ ದೀಪ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಹರಿಣಾಕ್ಷಿ ಜೆ.ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಹಿರಿಯರಿಂದ ಸಿಗುವ ಮಹತ್ವಪೂರ್ಣ ಹಾಗೂ ಮೌಲ್ಯಾಧಾರಿತ ಮಾತುಗಳನ್ನು ಜೀವನದಲ್ಲಿ ಅಳವಡಿಸಿ ಸಫಲತೆಯ ಮಾರ್ಗವನ್ನು ಕಂಡುಕೊಳ್ಳಬೇಕು. ಪ್ರಥಮ ಹಾಗೂ ದ್ವಿತೀಯ ಪಿಯುಸಿ ಎನ್ನುವುದು ಮುಂದಿನ ವಿದ್ಯಾರ್ಜನೆಗಿರುವ ಪ್ರಮುಖ ಘಟ್ಟ. ಆಸಕ್ತಿಯ ವಿಷಯಗಳನ್ನು ಆಯ್ಕೆ ಮಾಡಿ ಉನ್ನತ ವ್ಯಾಸಂಗದತ್ತ ಗಮನಹರಿಸಬಹುದು ಎಂದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕ ಡಾ.ಕೆ.ಎನ್.ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಜ್ಞಾನದ ಸಂಕೇತವಾದ ದೀಪವನ್ನು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅಶ್ವೀಜ್ ಕಶ್ಯಪ್ ಅವರಿಗೆ ಮೌನ ಪ್ರಾರ್ಥನೆ ಮೂಲಕ ಮೃತರ ಆತ್ಮಕ್ಕೆ ಸದ್ಗತಿಯನ್ನು ಕೋರಲಾಯಿತು.
ಜೆಇಇ ಪ್ರಥಮ ಹಂತದ ಪರೀಕ್ಷೆಯಲ್ಲಿ ೯೯.೨೮ ಪರ್ಸೆಂಟೈಲ್ ಪಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಹನ್ ಕೆ.ಎಲ್ ಸನ್ಮಾನಿಸಲಾಯಿತು. ಕಾಲೇಜಿನ ವಾರ್ಷಿಕ ಸಂಚಿಕೆ ೨೦೨೪-೨೫ನೇ ಸಾಲಿನ ಚಿಗುರು ಇದರ ಮುಖಪುಟ ಅನಾವರಣ ಮಾಡಲಾಯಿತು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕಿ ವತ್ಸಲಾ ರಾಜ್ಞಿ ಉಪಸ್ಥಿತರಿದ್ದರು. ಕಾಲೇಜಿನ ಉಪಪ್ರಾಂಶುಪಾಲ ಎಂ.ದೇವಿಚರಣ್ ರೈ ಸ್ವಾಗತಿಸಿ, ಪ್ರಸ್ತಾವನೆಗೈದರು. ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ದಯಾಮಣಿ ಟಿ.ಕೆ ವಂದಿಸಿದರು. ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ತುಷಾರಾ ಆರ್.ಬಿ.ನಿರೂಪಿಸಿದರು.