ರಾಜ್ಯಮಟ್ಟದ ಕಬಡ್ಡಿಯಲ್ಲಿ ವಿವೇಕಾನಂದ ಕಾಲೇಜು ದ್ವಿತೀಯ

PTR_22 APR_3
Published on

ಪುತ್ತೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಆಯೋಜಿಸಿದ ರಾಜ್ಯಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಪುರುಷರ ತಂಡ ದ್ವಿತೀಯ ಸ್ಥಾನ ಗಳಿಸಿದೆ.

ಮೈಸೂರಿನ ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಮ್ಯಾಟ್ ಅಂಕಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ರಾಜ್ಯಾದ್ಯಂತ ಎಂಟು ವಿಭಾಗದ ಒಟ್ಟು ೧೬ ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಅತ್ಯುತ್ತಮ ನಿರ್ವಹಣೆ ನೀಡಿದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದಿದೆ.

ಅಂತಿಮ ವರ್ಷದ ಎಂಬಿಎ ವಿಭಾಗದ ಬಬಿತ್‌ರಾಜ್, ದ್ವಿತೀಯ ವರ್ಷದ ಮೆಕ್ಯಾನಿಕಲ್ ವಿಭಾಗದ ನಿತ್ಯ ಎನ್., ಪ್ರಥಮ ಇಲೆಕ್ಟ್ರಾನಿಕ್ಸ್ ವಿಭಾಗದ ತೇಜಸ್, ಪ್ರಥಮ ಮೆಕ್ಯಾನಿಕಲ್ ವಿಭಾಗದ ಹಿತೇಶ್, ವಿಜೇತ್, ಗೌರವ್, ಪ್ರತೀಕ್, ಯಶಸ್, ಪ್ರಥಮ ಇಲೆಕ್ಟ್ರಾನಿಕ್ಸ್ ವಿಭಾಗದ ವಂಶಿಕ್, ದ್ವಿತೀಯ ಮೆಕ್ಯಾನಿಕಲ್ ವಿಭಾಗದ ಭುವನ್‌ರಾಮ್, ಅಂತಿಮ ಇಲೆಕ್ಟ್ರಾನಿಕ್ಸ್ ವಿಭಾಗದ ಗುರುಚರಣ್ ಮತ್ತು ಅಂತಿಮ ಎಐಎಂಎಲ್ ವಿಭಾಗದ ಪ್ರಫುಲ್ ತಂಡದಲ್ಲಿದ್ದರು.

ಮಂಗಳೂರಿನಲ್ಲಿ ನಡೆದ ಮಂಗಳೂರು ವಿಭಾಗಮಟ್ಟದ ಸ್ಪರ್ಧೆಯಲ್ಲಿ ಕಾಲೇಜು ತಂಡವು ದ್ವಿತೀಯ ಸ್ಥಾನಿಯಾಗಿ ರಾಜ್ಯಮಟ್ಟಕ್ಕೆ ಅರ್ಹತೆ ಗಳಿಸಿಕೊಂಡಿತ್ತು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಕಬಡ್ಡಿ ಆಟಗಾರ ಸತ್ಯನ್ ದೊಡ್ಡಮನೆ ಹಾಗೂ ಕಬಕ ಮಹಾದೇವಿ ಕ್ಲಬ್‌ನ ಹಿರಿಯ ಕಬಡ್ಡಿ ಆಟಗಾರ ವಸಂತ ಗೌಡ ಅವರು ತರಬೇತಿ ನೀಡಿದ್ದಾರೆ ಎಂದು ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ ಕೆ. ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net