ವಿಸಿಬಿ ಕಮ್ ಬ್ರಿಡ್ಜ್ ಶಿಥಿಲ!: ನಿರ್ವಹಣೆ ಕೊರತೆ ಮೌನ ವಹಿಸಿದ ಇಲಾಖೆ ತುರ್ತು ಕ್ರಮಕ್ಕೆ ಆಗ್ರಹ

New Project (4)
Published on

ಪುರುಷೋತ್ತಮ ಪೆರ್ಲ ಕಾಸರಗೋಡು

ಜಿಲ್ಲೆಯ ನಾನಾ ಕಡೆ ಲಕ್ಷಾಂತರ ರೂ.ವೆಚ್ಚದಲ್ಲಿ ನಿರ್ಮಿಸಿರುವ ವಿಸಿಬಿ ಕಮ್ ಬ್ರಿಡ್ಜ್ ಯೋಜನೆ, ಸಂಬಂಧಪಟ್ಟ ಇಲಾಖೆಯ ನಿರ್ವಹಣೆ ಕೊರತೆಯಿಂದ ಸೊರಗುತ್ತಿದೆ. ವಿವಿಧ ಹೊಳೆ, ತೋಡುಗಳಿಗೆ ಸೇತುವೆ ನಿರ್ಮಾಣದ ಸಂದರ್ಭ ಕೃಷಿ ಅನುಕೂಲ ಹಾಗೂ ಜಲಸಂರಕ್ಷಣೆಗಾಗಿ ಕಿಂಡಿ ಅಣೆಕಟ್ಟುಗಳನ್ನೂ ನಿರ್ಮಿಸಲಾಗುತ್ತಿದ್ದು, ಕ್ರಮೇಣ ಅವುಗಳ ನಿರ್ವಹಣೆಗೆ ಮುಂದಾಗದಿರುವುದರಿಂದ ಬಹುತೇಕ ವಿಸಿಬಿಗಳು ಹಾಳಾಗುತ್ತಿದೆ. ಇದರ ಪರಿಣಾಮ ಸೇತುವೆಗಳಿಗೂ ಧಕ್ಕೆಯುಂಟಾಗುತ್ತಿದೆ.

ಜಿಲ್ಲೆಯ ನಾನಾ ಕಡೆ ಕಿರು ನೀರಾವರಿ ಇಲಾಖೆ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳು ಪ್ರತ್ಯೇಕವಾಗಿ ನಿರ್ಮಿಸುತ್ತಿರುವ ಹಲವಾರು ವಿಸಿಬಿಗಳಿವೆ. ಅವುಗಳಿಗೆ ಬೇಸಿಗೆಯಲ್ಲಿ ಎರಡೂ ಬದಿ ಹಲಗೆಯಿರಿಸಿ ಮಧ್ಯೆ ಮಣ್ಣು ತುಂಬುವ ಮೂಲಕ ನೀರು ಸಂಗ್ರಹಿಸಲಾಗುತ್ತಿದೆ. ಈ ರೀತಿ ತುಂಬುವ ಮಣ್ಣನ್ನು ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಸೂಕ್ತ ರೀತಿಯಲ್ಲಿ ಸ್ಥಳಾಂತರಿಸದಿರುವುದರಿಂದ ಹೊಳೆಯಲ್ಲಿ ಹೂಳು ತುಂಬಿಕೊಳ್ಳಲೂ ಕಾರಣವಾಗುತ್ತಿದೆ.

ಮಳೆಗಾಲದಲ್ಲಿ ಭಾರಿ ಗಾತ್ರದ ಮರಮಟ್ಟುಗಳು ಸೇರಿದಂತೆ ವಿವಿಧ ತ್ಯಾಜ್ಯ ವಿಸಿಬಿಗೆ ಅಡ್ಡ ತಂಗುತ್ತಿದ್ದು, ಇವುಗಳನ್ನು ಸಕಾಲದಲ್ಲಿ ತೆರವುಗೊಳಿಸುವಲ್ಲೂ ಇಲಾಖೆ ಮುಂದಾಗುತ್ತಿಲ್ಲ. ಕೆಲವು ಕಡೆ ಕಿರು ನೀರಾವರಿ ಇಲಾಖೆ ನಿರ್ಮಿಸಿರುವ ವಿಸಿಬಿ ಕಮ್ ಬ್ರಿಡ್ಜ್‌ಗಳು ತ್ಯಾಜ್ಯ ತೆರವುಗೊಳಿಸದೆ ಹಾಳಾಗುತ್ತಿದೆ. ಈ ರೀತಿ ಮಳೆನೀರಲ್ಲಿ ಬಂದು ಸ್ಥಗಿತಗೊಳ್ಳುವ ತ್ಯಾಜ್ಯದಿಂದ ನೆರೆಹಾವಳಿಯೂ ಹೆಚ್ಚಾಗುತ್ತಿದೆ. ಭಾರಿ ಪ್ರಮಾಣದಲ್ಲಿ ಹರಿದು ಬರುವ ನೀರಿಗೆ ಸರಾಗವಾಗಿ ಹರಿದುಹೋಗಲು ಸಾಧ್ಯವಾಗದಿರುವುದರಿಂದ ಆಸುಪಾಸು ನೆರೆ ಹೆಚ್ಚಾಗಲು ಕಾರಣವಾಗುತ್ತದೆ.

ತ್ಯಾಜ್ಯ ತೆರವಿಗೆ ಜನಾಗ್ರಹ

ಜಿಲ್ಲೆಯ ನಾನಾ ಕಡೆ ಹೊಳೆ, ತೋಡುಗಳಿಗೆ ಅಡ್ಡ ಸ್ಥಳೀಯಾಡಳಿತ ಹಾಗೂ ಕಿರು ನೀರಾವರಿ ಇಲಾಖೆ ವತಿಯಿಂದ ವಿಸಿಬಿ ಅಥವಾ ವಿಸಿಬಿ ಕಮ್ ಬ್ರಿಡ್ಜ್ ನಿರ್ಮಿಸಲಾಗುತ್ತಿದ್ದು, ಅವುಗಳ ನಿರ್ವಹಣೆಗೆ ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಳ್ಳುವಂತೆ ಆಯಾ ಪ್ರದೇಶದ ಕೃಷಿಕರು ಹಾಗೂ ಸಂಘ ಸಂಸ್ಥೆಗಳು ಆಗ್ರಹಿಸಿದೆ. ಕೆಲವೊಂದು ಕಡೆ ಸಂಘ ಸಂಸ್ಥೆಗಳು ಶ್ರಮದಾನದ ಮೂಲಕ ಈ ರೀತಿ ತುಂಬಿಕೊಳ್ಳುವ ತ್ಯಾಜ್ಯ ತೆರವುಗೊಳಿಸುತ್ತಿದ್ದರೂ, ಎಲ್ಲ ಕಡೆ ಇದು ನಡೆಯುತ್ತಿಲ್ಲ. ತ್ಯಾಜ್ಯ ತೆರವುಗೊಳಿಸಲು ಪ್ರತ್ಯೇಕ ಫಂಡ್ ಲಭಿಸುತ್ತಿದ್ದರೂ, ಕಾರ್ಯಗತಗೊಳಿಸಲು ಸಂಬಂಧಪಟ್ಟವರು ಮುಂದಾಗುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ. ಕಿರು ಅಣೆಕಟ್ಟುಗಳಲ್ಲಿ ಈ ರೀತಿ ಸಂಗ್ರಹವಾಗುವ ತ್ಯಾಜ್ಯದಿಂದ ನೀರಿನ ಹರಿವು ಶೇ.50ರಷ್ಟು ಸ್ಥಗಿತಗೊಳ್ಳುತ್ತಿದೆ.

ಸ್ಥಳೀಯಾಡಳಿತ ಜತೆಗೆ ಕಿರು ನೀರಾವರಿ ಇಲಾಖೆ ಅಧೀನದಲ್ಲೂ ವಿಸಿಬಿ ಕಮ್ ಬ್ರಿಡ್ಜ್ ಹೊಂದಿದ್ದು, ಅವುಗಳ ನಿರ್ವಹಣೆ ಆಯಾ ಇಲಾಖೆಯದ್ದಾಗಿದೆ. ಕಿರು ನೀರಾವರಿ ಇಲಾಖೆ ಅಧೀನದಲ್ಲಿರುವ ಇಂಥ ವಿಸಿಬಿಗಳ ಸ್ವಚ್ಛತೆಗೆ ಆಯಾ ವಿಭಾಗೀಯ ಕಚೇರಿಗಳಿಗೆ ಮಾಹಿತಿ ನೀಡಲಾಗಿದೆ. ಸ್ವಚ್ಛತೆಯ ಮೊತ್ತಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಅನುದಾನ ಮಂಜೂರಾಗಿ ಲಭಿಸಿದ ತಕ್ಷಣ ಟೆಂಡರ್ ಕರೆದು ಸ್ವಚ್ಛತಾ ಕಾರ್ಯ ನಡೆಸಲಾಗುವುದು. ಲಾಲಿ ಜಾರ್ಜ್, ಕಾಸರಗೋಡು ಕಿರು ನೀರಾವರಿ ಇಲಾಖೆ ಮುಖ್ಯ ಅಭಿಯಂತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net