

ಪುತ್ತೂರು: ಆಧ್ಯಾತ್ಮಿಕ ವಿಜ್ಞಾನದಲ್ಲಿ ನಂಬಿಕೆಗಿಂತ ಅನುಭವಕ್ಕೆ ಹೆಚ್ಚು ಸ್ಥಾನವಿದೆ. ಅನುಭವದ ಮಾತುಗಳನ್ನು ವಿವೇಕಾನಂದರು ಜಗತ್ತಿಗೆ ಪಸರಿಸುವ ಕಾರ್ಯ ಮಾಡಿದರು. ಸಂಘ ಹಾಗೂ ಬೇರೆ ಬೇರೆ ಸಾಂಸ್ಕೃತಿಕ ಸಂಘಟನೆಗಳಿಗೆ ವಿವೇಕಾನಂದರ ವಿಚಾರಗಳು ಆಧ್ಯಾತ್ಮಿಕ ಶಕ್ತಿ ತುಂಬುವ ಕಾರ್ಯ ಮಾಡಿದೆ. ಪ್ರಕೃತಿಯ ನಡುವಿನಲ್ಲಿ ಮನುಷ್ಯ ಶಾಶ್ವತವಾದ ಶಾಂತಿಯನ್ನು ಪಡೆಯಬಹುದು. ವಿವೇಕಾನಂದರ ವಿಚಾರಗಳು ಪ್ರಜ್ವಲವಾಗಿದ್ದು, ಅವರ ಆದರ್ಶಗಳನ್ನು ಹೇಳದ ಪಠ್ಯ ಪುಸ್ತಕಗಳಿಗೆ ಽಕ್ಕಾರವಿರಲಿ ಎಂದು ಬೆಂಗಳೂರು ವಂದೇಮಾತರಂ ಪಾಠ ಶಾಲೆಯ ಸ್ಥಾಪಕ ಡಾ. ಜಿ. ಬಿ. ಹರೀಶ ಹೇಳಿದರು.
ನೆಹರು ನಗರ ವಿವೇಕಾನಂದ ಆವರಣದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ನಡೆದ ವಿವೇಕಾನಂದ ಜಯಂತಿ ಉದ್ಘಾಟಿಸಿ, ಸಂಸ್ಥೆಯ ನೂತನ ಅಂತರ್ಜಾಲವನ್ನು ಅನಾವರಣಗೊಳಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಭಾರತೀಯ ಪರಂಪರೆಯನ್ನು ನೆನಪು ಮಾಡಿಕೊಟ್ಟ ವಿವೇಕಾನಂದರು ಜಗತ್ತಿನ ಆಸ್ತಿಯಾಗಿದ್ದಾರೆ. ಆತ್ಮವಿಶ್ವಾಸ ಇದ್ದರೆ ಜಗತ್ತನ್ನು ಗೆಲ್ಲಬಹುದಾಗಿದ್ದು, ಮೆಕಾಲೆ ಶಿಕ್ಷಣ ಆತ್ಮವಿಶ್ವಾಸದ ಕೊರತೆಯನ್ನು ನಿರ್ಮಾಣ ಮಾಡಿದೆ. ಜೀವನ ಮೌಲ್ಯಗಳನ್ನು ಕೊಡುವ ಶಕ್ತಿಯಿರುವ ಧರ್ಮ ನಮ್ಮದು ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಾಗಿದೆ. ಸಮಯದ ಬದಲಾವಣೆಗೆ ತರುಣ ತರುಣಿಯರ ಅಗತ್ಯವಿದೆ. ಧರ್ಮ ಸಂಸ್ಕೃತಿಯ ಬಗ್ಗೆ ಎಲ್ಲ ಕಡೆ ಮಾತನಾಡಬೇಕು ಎಂದರು.
ವಿವೇಕಾನಂದ ಶಿಶು ಮಂದಿರದ ವಿದ್ಯಾರ್ಥಿಗಳು ವಿವೇಕವಾಣಿಯನ್ನು ಪ್ರಸ್ತುತಪಡಿಸಿದರು. ವೆಬ್ಸೈಟ್ ರಚನೆಯ ಟೀಮ್ ಲೀಡರ್ ರಜತ್ ಬಲ್ಲಾಳ್ ಅವರನ್ನು ಗೌರವಿಸಲಾಯಿತು. ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಯ ಬಹುಮಾನ ವಿತರಣೆ ನಡೆಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಯಶವಂತಿ ಬಹುಮಾನಿತರ ಪಟ್ಟಿ ಓದಿದರು. ನಿರ್ದೇಶಕಿ ಡಾ.ಸುಧಾ ರಾವ್ ವಂದಿಸಿದರು. ಉಪನ್ಯಾಸಕಿ ಡಾ.ಶೃತಿ ಕಾರ್ಯಕ್ರಮ ನಿರೂಪಿಸಿದರು.
ಪ್ರಾತ್ಯಕ್ಷಿಕೆಗಳ ಅನಾವರಣ
ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ವಿಕಸಿತ ಭಾರತ ಪರಿಕಲ್ಪನೆಗೆ ಪೂರಕವಾಗಿ ಸಮಾಜಮುಖಿ ಹಾಗೂ ಹೊಸ ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ತಯಾರಿಸಿದ ವಿವಿಧ ರೀತಿಯ ಪ್ರಾಜೆಕ್ಟ್ಗಳ ಅನಾವರಣ ಹಾಗೂ ಪ್ರಾತ್ಯಕ್ಷಿಕೆ ನಡೆಯಿತು.
ನ್ಯೂಸ್ ಬುಲೆಟಿನ್
ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದಿಂದ ವಿದ್ಯಾರ್ಥಿಗಳಿಂದ ಕಾರ್ಯಕ್ರಮವನ್ನು ನ್ಯೂಸ್ ಬುಲೆಟಿನ್ ರೂಪದಲ್ಲಿ ವಿಕಸನ ಮೂಲಕ ಪ್ರಚುರಪಡಿಸಿದರು. ಪತ್ರಿಕೋದ್ಯಮದಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳು ಈ ರೀತಿಯ ಪ್ರಯತ್ನ ನಡೆಸಿದ್ದಾರೆ.