ಪುತ್ತೂರು: ಅಹಮದಾಬಾದ್ ಇನ್ಸ್ಟಿಟ್ಯೂಟ್ ಫಾರ್ ಪ್ಲಾಸ್ಮಾ ರಿಸರ್ಚ್ ಸಂಸ್ಥೆ ಹಾಗೂ ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯದ ಸಹಯೋಗದಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಪ್ಲಾಸ್ಮ ವಿಜ್ಞಾನ ಕುರಿತ ವಸ್ತು ಪ್ರದರ್ಶನ, ಪ್ರಾಯೋಗಿಕ ಪ್ರಾತ್ಯಕ್ಷಿಕೆ, ವಿಚಾರ ಸಂಕಿರಣಗಳನ್ನು ಆ.೩೦ ರಿಂದ ಸೆ. ೧ರ ತನಕ ಕೇಶವ ಸಂಕಲ್ಪ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿವೇಕಾನಂದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಹೇಳಿದರು.
ಒಂಭತ್ತು ಹಾಗೂ ಹತ್ತನೇಯ ತರಗತಿಯ ವಿದ್ಯಾರ್ಥಿಗಳು ಮತ್ತು ಪದವಿ ಪೂರ್ವ ಹಾಗೂ ಪದವಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಭವಿಷ್ಯದಲ್ಲಿ ವಿಫುಲ ಅವಕಾಶಗಳನ್ನು ಸೃಷ್ಟಿಸಲಿರುವ ಪ್ಲಾಸ್ಮಾ ಜಗತ್ತಿನ ರೋಚಕ ಲೋಕವನ್ನು ಅನಾವರಣಗೊಳಿಸುವ ಕಾರ್ಯಕ್ರಮವಾಗಿರಲಿದೆ. ಭವಿಷ್ಯದಲ್ಲಿ ಪ್ರಾಸ್ಮಾ ವಿಜ್ಞಾನದ ಕೊಡುಗೆ ಮಾನವ ಕಲ್ಯಾಣದ ಹೊಸ ಶಖೆಯನ್ನು ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ. ಆ ಹಿನ್ನೆಲೆಯಲ್ಲಿ ನಡೆಯುವ ಪ್ಲಾಸ್ಮಾ ವಿಜ್ಞಾನದ ಕಾರ್ಯಕ್ರಮದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ, ಆತ್ಮನಿರ್ಭರ ಭಾರತ, ವಿಶ್ವಗುರು ಭಾರತದ ಕನಸಿಗೆ ಶಕ್ತಿ ತುಂಬಿದಂತಾಗುತ್ತದೆ. ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳನ್ನು ಈಗಾಗಲೇ ಸಂಪರ್ಕಿಸಲಾಗಿದ್ದು, ಸುಮಾರು ೨೫೦೦ ವಿದ್ಯಾರ್ಥಿಗಳ ನೋಂದಾವಣೆಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆ.೩೦, ೩೧ ಮತ್ತು ಸೆ. ೧ ರಂದು ಕಾಲೇಜಿನ ಕೇಶವ ಸಂಕಲ್ಪ ಸಭಾಭವನದಲ್ಲಿ ಪ್ರಾಸ್ಮ ವಿಜ್ಞಾನ ಕುರಿತ ವಸ್ತುಪ್ರದರ್ಶನ, ಪ್ರಾಯೋಗಿಕ ಪ್ರಾತ್ಯಕ್ಷಿಕೆ, ವಿಚಾರಸಂಕಿರಣ ಮುಂತಾದ ಕಾರ್ಯಕ್ರಮಗಳು ನಡೆಯಲಿದ್ದು, ಆ.೩೦ ರಂದು ಬೆಳಗ್ಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಥಕ ಸಂಘ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಅಹಮದಾಬಾದ್‌ನ ಐ.ಪಿ.ಆರ್. ನ ಸಮುದಾಯ ಸಂಪರ್ಕ ವಿಭಾಗ ಮುಖ್ಯಸ್ಥ ಡಾ. ಎ. ವಿ. ರವಿಕುಮಾರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪೂನಾ ಟಾಟಾ ಮೂಲಭೂತ ಸಂಶೋಧನಾ ಕೇಂದ್ರದ ಜಿ.ಎಂ.ಆರ್.ಟಿ. ವೀಕ್ಷಣಾಲಯದ ಡೀನ್ ಪ್ರೊ. ಈಶ್ವರ ಚಂದ್ರ ಸಿ.ಎಚ್. ಉದ್ಘಾಟನೆ ಮಾಡಲಿದ್ದಾರೆ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ. ಕೃಷ್ಣ ಭಟ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಎರ್ಮುಂಜ ಶಂಕರ ಜೋಯಿಸ, ವಿಶೇಷ ಅಧಿಕಾರಿ ಮತ್ತು ಪ್ರಭಾರ ಪ್ರಾಂಶುಪಾಲ ಡಾ. ಶ್ರೀಧರ ನಾಯಕ್, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಭವ್ಯಾ ಪಿ.ಆರ್. ಉಪಸ್ಥಿತರಿದ್ದರು.