ಯೋಧರ ರಾಷ್ಟ್ರಪ್ರೇಮದಿಂದ ದೇಶ ಸುಭದ್ರ - ಶ್ರೀಕಾಂತ್ ಶೆಟ್ಟಿ ಹೇಳಿಕೆ - ಕಾರ್ಗಿಲ್ ವಿಜಯ-ಯೋಧ ನಮನ

PTR_22 JUL_2
Published on


ಪುತ್ತೂರು: ದೇಶವನ್ನು ಅಖಂಡ ಭಾರತವನ್ನಾಗಿ ಮಾಡಬೇಕು ಎನ್ನುವ ಹಂಬಲಕ್ಕೆ ಕಾರ್ಗಿಲ್ ವಿಜಯ ಸಂಭ್ರಮಾಚರಣೆ ಬುನಾದಿಯಾಗಬೇಕಾಗಿದೆ. ನಮ್ಮ ಪೂರ್ವಜರು ಮಾಡಿದ ತ್ಯಾಗ, ಬಲಿದಾನಗಳು ಮಕ್ಕಳಿಗೆ ಪ್ರೇರಣೆ ನೀಡಲಿ. ಭಾರತವನ್ನು ವಿಶ್ವಗುರುವನ್ನಾಗಿ ಅಲಂಕರಿಸಲು ಬೇಕಾದ ಕೆಲಸ ಕಾರ್ಯಗಳು ನಮ್ಮಿಂದ ಸಾಧ್ಯವಾಗಲಿ ಎಂದು ವಾಗ್ಮಿ ಶ್ರೀಕಾಂತ್ ಶೆಟ್ಟಿ ಹೇಳಿದರು.


ಸೋಮವಾರ ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ೨೫ನೇ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಡೆದ ಕಾರ್ಗಿಲ್‌ವಿಜಯ-ಯೋಧ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.


ಸಾವಿರ ವರ್ಷಗಳ ಹೋರಾಟದ ಬಳಿಕವೂ ತನ್ನತನವನ್ನು ಉಳಿಸಿಕೊಂಡ ಏಕೈಕ ದೇಶವೆಂದರೆ ಭಾರತ. ಈ ಜಗತ್ತಿನಲ್ಲಿ ಹೊನ್ನಿಗಾಗಿ, ಹೆಣ್ಣಿಗಾಗಿ, ಅಽಕಾರಕ್ಕಾಗಿ ಯುದ್ಧಗಳು ನಡೆದಿವೆ. ಆದರೆ ತನ್ನ ಸಂಸ್ಕೃತಿ, ತನ್ನ ಸಭ್ಯತೆಯ ಉಳಿವಿಗಾಗಿ ಒಂದು ಸಾವಿರ ವರ್ಷಗಳ ನಿರಂತರ ಯುದ್ಧವೇನಾದರೂ ನಡೆದಿದ್ದರೆ ಅದು ಈ ಪುಣ್ಯಭೂಮಿ ಭಾರತದಲ್ಲಿ ಮಾತ್ರ. ಒಬ್ಬೊಬ್ಬ ಯೋಧನ ರಾಷ್ಟ್ರಪ್ರೇಮ ಹಾಗೂ ಈ ನೆಲದ ಋಣಭಾವದಿಂದಲೇ ಇಂದು ದೇಶ ಸುಭದ್ರವಾಗಿದೆ ಎಂದರು.


ಮರಣೋತ್ತರ ಶೌರ್ಯ ಚಕ್ರ ಪುರಸ್ಕೃತ ಯೋಧ ಕ್ಯಾಪ್ಟನ್ ಎಂ. ವಿ. ಪ್ರಾಂಜಲ್ ತಂದೆ ಎಂ. ವೆಂಕಟೇಶ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್ ಮಾತನಾಡಿ ಯೋಧರ ಬದುಕಿನಲ್ಲಿ ರಾಷ್ಟ್ರದ ಭದ್ರತೆ ಪ್ರಮುಖವಾಗಿರುತ್ತದೆ. ಇಂದಿನ ವಿದ್ಯಾರ್ಥಿಗಳು ದೇಶದ ಒಳಿತಿನ ಚಿಂತನೆಯನ್ನು ಮಾಡಬೇಕು. ಗಡಿಯನ್ನು ಕಾಯುವ ಯೋಧರು ನಮಗೆ ಪ್ರೇರಣೆಯಾಗಲಿ ಎಂದರು.


ಮರಣೋತ್ತರ ಶೌರ್ಯ ಚಕ್ರ ಪುರಸ್ಕೃತ ಯೋಧ ಕ್ಯಾಪ್ಟನ್ ಎಂ. ವಿ. ಪ್ರಾಂಜಲ್ ತಾಯಿ ಅನುರಾಧಾ ವೆಂಕಟೇಶ್, ಉಪಪ್ರಾಂಶುಪಾಲ ದೇವಿಚರಣ್ ರೈ ಎಂ. ಉಪಸ್ಥಿತರಿದ್ದರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ. ಸ್ವಾಗತಿಸಿ, ಪ್ರಾಸ್ತಾವನೆಗೈದರು. ಪ್ರಾಂಶುಪಾಲ ಮಹೇಶ್ ನಿಟಿಲಾಪುರ ವಂದಿಸಿದರು. ಉಪನ್ಯಾಸಕಿ ಭಾಗ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.

ದೇಶಸೇವೆಯನ್ನು ಬೇರೆ ಬೇರೆ ರೀತಿಯಲ್ಲಿ ಮಾಡಬಹುದು. ಮುಂದಿನ ಜನಾಂಗವನ್ನು ಸ್ಪಷ್ಟ ಗುರಿಯೆಡೆಗೆ ಬೆಳೆಸುವ, ಅಂತೆಯೇ ದೇಶಪ್ರೇಮವನ್ನು ಮೂಡಿಸುವ ಜವಾಬ್ದಾರಿ ಹೊತ್ತಿರುವ ಶಿಕ್ಷಣ ಸಂಸ್ಥೆಯನ್ನು ನಡೆಸುವುದು ಕೂಡ ಒಂದು ಅತ್ಯುತ್ತಮ ದೇಶಸೇವೆಯಾಗಿದೆ.
| ಎಂ. ವೆಂಕಟೇಶ್, ಹುತಾತ್ಮ ಯೋಧ ಕ್ಯಾ.ಪ್ರಾಂಜಲ್ ತಂದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net