

ಪುತ್ತೂರು: ಹಿರಿಯ ವಿದ್ಯಾರ್ಥಿಗಳು ವಿದ್ಯಾ ಸಂಸ್ಥೆಗೆ ದೊಡ್ಡ ಆಸ್ತಿ. ಈ ಮೂಲಕ ಪ್ರಸ್ತುತ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಅವರೊಂದಿಗೆ ಹಿರಿಯ ವಿದ್ಯಾರ್ಥಿಗಳು ಸಂಪರ್ಕದಲ್ಲಿರಬೇಕು. ಹೀಗೆ ಎಲ್ಲರೂ ಸೇರಿ ಶಿಕ್ಷಣವನ್ನು ಒಗ್ಗಟ್ಟಾಗಿ ಬೆಳೆಸಬಹುದು ಎಂದು ವಿವೇಕಾನಂದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಹೇಳಿದರು.
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ೧೯೬೭-೧೯೭೦ರ ಬಿ.ಎಸ್ಸಿಯ ಬಿ.ಜಡ್‌ಸಿಯ ಹಿರಿಯ ವಿದ್ಯಾರ್ಥಿಗಳು ಅಧ್ಯಯನ ಮಾಡಿ ಹೊರಗೆ ಹೋಗಿ ೫೫ ವರ್ಷಗಳ ನಂತರ ನಡೆದ ಮೊದಲ ಮರು ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಸಾಯನಶಾಸ ವಿಭಾಗ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಸುಂದರ್ ಭಟ್ ಮಾತನಾಡಿ, ಗುರುವಿನ ಮಹತ್ವ ಯಾವಾಗಲೂ ಅವರ ವಿದ್ಯಾರ್ಥಿಗಳು ನೀಡುವ ಗೌರವದಲ್ಲಿ ಅಡಗಿರುತ್ತದೆ ಮತ್ತು ಗುರು ಶಿಷ್ಯರ ನಡುವೆ ಯಾವಾಗಲು ಉತ್ತಮ ಸಂಬಂಧ ಬೆಳೆಯುವುದು ಮುಖ್ಯ ಎಂದರು.
ನಿವೃತ್ತ ವಿಶ್ರಾಂತ ಪ್ರಾಧ್ಯಾಪಕರಾದ ಸುಂದರ ಭಟ್, ವಿ.ಬಿ.ಅರ್ತಿಕಜೆ, ಎ.ವಿ.ನಾರಾಯಣ, ವತ್ಸಲಾ ರಾಜ್ಞಿ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್, ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಸತೀಶ್ ರಾವ್ ಮೊದಲಾದವರು ಉಪಸ್ಥಿತರಿದ್ದರು. ಗಂಗಾಧರ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.